ದಿಲ್ಲಿಯ ನೀರಿನ ಪಾಲು ಬಿಡುಗಡೆ ಮಾಡುವವರೆಗೆ ಉಪವಾಸ : ಆತಿಶಿ
ಹೊಸದಿಲ್ಲಿ : ಹರ್ಯಾಣ ಸರಕಾರ ದಿಲ್ಲಿಯ ನೀರಿನ ಸರಿಯಾದ ಪಾಲು ಬಿಡುಗಡೆ ಮಾಡುವ ವರೆಗೆ ತನ್ನ ಉಪವಾಸ ಮುಷ್ಕರ ಮುಂದುವರಿಯಲಿದೆ ಎಂದು ದಿಲ್ಲಿ ಸಚಿವೆ ಆತಿಶಿ ಸೋಮವಾರ ಹೇಳಿದ್ದಾರೆ.
ನನ್ನ ರಕ್ತದೊತ್ತಡ ಹಾಗೂ ಸಕ್ಕರೆ ಮಟ್ಟ ಇಳಿಕೆಯಾಗುತ್ತಿದೆ. ತೂಕ ಕೂಡ ಕಡಿಮೆ ಆಗುತ್ತಿದೆ. ಕಿಟೋನ್ ಮಟ್ಟ ತುಂಬಾ ಹೆಚ್ಚಾಗಿದೆ. ಇದರಿಂದ ದೀರ್ಘ ಕಾಲದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ನನ್ನ ದೇಹ ಎಷ್ಟು ಬಳಲುತ್ತಿದೆ ಎಂಬುದು ಮುಖ್ಯವಲ್ಲ. ಹರ್ಯಾಣ ಸರಕಾರ ನೀರು ಬಿಡುಗಡೆ ಮಾಡುವ ವರೆಗೆ ತಾನು ಉಪವಾಸ ಮುಷ್ಕರ ಮುಂದುವರೆಸಲಿದ್ದೇನೆ ಎಂದು ರವಿವಾರ ವೈದ್ಯರಿಂದ ತಪಾಸಣೆಗೆ ಒಳಗಾಗಿರುವ ಅವರು ಹೇಳಿದ್ದಾರೆ.
ಯಮುನಾ ನದಿಯಿಂದ ದಿಲ್ಲಿಯ ನೀರಿನ ಪಾಲನ್ನು ಕಳೆದ ಮೂರು ವಾರಗಳಿಂದ ಪ್ರತಿ ದಿನ 10 ಕೋಟಿ ಗ್ಯಾಲನ್ ಕಡಿಮೆ ಮಾಡಲಾಗಿದೆ. ಇದರಿಂದ 100 ಎಂಜಿಡಿ ನೀರು ಕೊರತೆಯಾಗಿದೆ. ಪರಿಣಾಮ ದಿಲ್ಲಿಯ 28 ಲಕ್ಷ ಜನರಿಗೆ ತೊಂದರೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಪ್ ನಿಯೋಗ ರವಿವಾರ ಭೇಟಿಯಾದ ಬಳಿಕ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ದಿಲ್ಲಿಗೆ ಹೆಚ್ಚುವರಿ ನೀರನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತದೆಯೋ ಎಂದು ಪರಿಶೀಲಿಸುವುದಾಗಿ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಉಪವಾಸ ಮುಷ್ಕರದಿಂದಾಗಿ ಆತಿಶಿ ಅವರ ಆರೋಗ್ಯ ಹದಗೆಡುತ್ತಿದ್ದು, ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆತಿಶಿ ಅವರ ತೂಕ ಹಾಗೂ ರಕ್ತದೊತ್ತಡ ತೀವ್ರವಾಗಿ ಇಳಿಕೆಯಾಗುತ್ತಿದೆ. ಇದು ಅಪಾಯಕಾರಿ ಎಂದು ಎಲ್ ಎನ್ ಜೆ ಪಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹೇಳಿಕೆ ತಿಳಿಸಿದೆ.