ಹಬ್ಬದ ವಿಶೇಷ ರೈಲು ರದ್ದು; ಉದ್ರಿಕ್ತರಿಂದ ಸ್ಟೇಷನ್ ಗೆ ಕಲ್ಲು ತೂರಾಟ

Update: 2023-11-15 03:51 GMT

Photo: twitter

ಹೊಸದಿಲ್ಲಿ: ಪಂಜಾಬ್ ನಿಂದ ಬಿಹಾರಕ್ಕೆ ಪ್ರಯಾಣ ಬೆಳೆಸಬೇಕಿದ್ದ ವಿಶೇಷ ರೈಲನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿದ್ದರಿಂದ ಕೋಪಗೊಂಡ ನೂರಾರು ಪ್ರಯಾಣಿಕರು ರೈಲು ನಿಲ್ದಾಣದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಸರ್ ಹಿಂದ್ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಹಬ್ಬದ ಸೀಸನ್ ನಲ್ಲಿ ಪಂಜಾಬ್ ನಿಂದ ಬಿಹಾರಕ್ಕೆ ವಿಶೇಷ ರೈಲನ್ನು ಹೊರಡಿಸಲು ನಿರ್ಧರಿಸಲಾಗಿದೆ. ಪಂಜಾಬ್ ನ ಫತೇಹ್ ಗಢ ಸಾಹಿಬ್ ನ ಸರ್ ಹಿಂದ್ ನಿಲ್ದಾಣದಿಂದ ಬಿಹಾರದ ಸಹರ್ಸಾ ನಿಲ್ದಾಣಕ್ಕೆ ರೈಲು ನಿಗದಿಯಾಗಿತ್ತು. ಇದು ರದ್ದಾದ ಹಿನ್ನೆಲೆಯಲ್ಲಿ ಉದ್ರಿಕ್ತರಾದ ಜನತೆ ರೈಲ್ವೆ ಹಳಿ ಮತ್ತು ಪ್ಲಾಟ್ ಫಾರಂ ಮೇಲೆ ನಿಂತು ಘೋಷಣೆಗಳನ್ನು ಕೂಗಿದರು. ಹಲವು ಮಂದಿ ಪೊಲೀಸರು ಹಾಗೂ ನಿಂತಿದ್ದ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದರು.

ಸೂರತ್ ನಿಂದ ಬಿಹಾರಕ್ಕೆ ತೆರಳುವ ರೈಲಿನಲ್ಲಿ ಜನದಟ್ಟಣೆಯಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಒಬ್ಬರು ಮೃತಪಟ್ಟು, ಮತ್ತೆ ಇಬ್ಬರು ಗಾಯಗೊಂಡ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿದೆ.

ಲಕ್ಷಾಂತರ ಮಂದಿ ದೀಪಾವಳಿಯನ್ನು ತಮ್ಮ ಕುಟುಂಬಗಳ ಜತೆ ಆಚರಿಸಲು ಹುಟ್ಟೂರಿಗೆ ತೆರಳುವ ಹಿನ್ನೆಲೆಯಲ್ಲಿ ಈ ದಟ್ಟಣೆಯನ್ನು ಅಸಮರ್ಪಕವಾಗಿ ನಿಭಾಯಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜನದಟ್ಟಣೆಯಿಂದ ಕೂಡಿದ ರೈಲು ಬೋಗಿಗಳ ಹೊರಗೆ ದೊಡ್ಡ ಸಂಖ್ಯೆಯ ಸಾಲುಗಳು ಕಂಡುಬರುವ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News