ಅಗ್ನಿಪಥ ಯೋಜನೆ | ಅಖಿಲೇಶ್ ಯಾದವ್-ಅನುರಾಗ್ ಠಾಕೂರ್ ನಡುವೆ ವಾಕ್ಸಮರ
ಹೊಸದಿಲ್ಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್ ನಡುವೆ ಮಂಗಳವಾರ ಲೋಕಸಭೆಯಲ್ಲಿ ಬಿರುಸಿನ ಮಾತಿನ ಚಕಮಕಿ ನಡೆಯಿತು.
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಖಿಲೇಶ್ ಯಾದವ್, ಸರಕಾರವು ಅಗ್ನಿಪಥ ಯೋಜನೆಯನ್ನು ಪ್ರಚಾರ ಮಾಡಲು ಮೊದಲು ಪ್ರಮುಖ ಕೈಗಾರಿಕೋದ್ಯಮಿಗಳಿಂದ ಈ ಯೋಜನೆಯ ಕುರಿತು ಬೆಂಬಲದ ಟ್ವೀಟ್ ಗಳನ್ನು ಆಯೋಜಿಸಿತು ಎಂದು ಆರೋಪಿಸಿದರು.
“ಅಗ್ನಿವೀರ್ ಯೋಜನೆಯು ಮೊದಲಿಗೆ ಪರಿಚಯವಾದಾಗ, ಪ್ರಮುಖ ಕೈಗಾರಿಕೋದ್ಯಮಿಗಳು ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು, ನಾವು ಅಗ್ನಿವೀರ್ ರಿಗೆ ಉದ್ಯೋಗಗಳನ್ನು ಒದಗಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು. ಈ ಯೋಜನೆಯು ಸಮಪರ್ಕವಾಗಿಲ್ಲ ಎಂಬುದು ಸರಕಾರಕ್ಕೆ ತಿಳಿದಿರುವುದರಿಂದ, ಅದು ಇದನ್ನು ನೆನಪಿಟ್ಟುಕೊಂಡಿರುತ್ತದೆ. ಹೀಗಾಗಿಯೇ, ಕೇಂದ್ರ ಸರಕಾರವು ತನ್ನ ಆಡಳಿತವಿರುವ ರಾಜ್ಯಗಳಿಗೆ ಸೇವೆಯಿಂದ ಮರಳುವ ಅಗ್ನಿವೀರ್ ರಿಗೆ ಉದ್ಯೋಗ ನೇಮಕಾತಿಯಲ್ಲಿ ಮೀಸಲಾತಿ ಒದಗಿಸುವಂತೆ ಸೂಚಿಸುತ್ತಿದೆ” ಎಂದು ವ್ಯಂಗ್ಯವಾಡಿದರು.
ಈ ಮಾತಿಗೆ ತಿರುಗೇಟು ನೀಡಿದ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ತಮ್ಮ ತವರು ರಾಜ್ಯವಾದ ಹಿಮಾಚಲ ಪ್ರದೇಶದ ಸೇನಾ ಪರಂಪರೆಯನ್ನು ಉಲ್ಲೇಖಿಸಿ, ಅಗ್ನಿಪಥ ಯೋಜನೆಯನ್ನು ಸಮರ್ಥಿಸಿಕೊಂಡರು.
“ದೇಶಕ್ಕೆ ಪ್ರಪ್ರಥಮ ಪರಮ ವೀರಚಕ್ರ ಪಡೆದ ಯೋಧನನ್ನು ಕೊಡುಗೆ ನೀಡಿದ ಹಾಗೂ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅತಿ ಹೆಚ್ಚು ಸಂಖ್ಯೆಯ ಹುತಾತ್ಮರನ್ನು ಹೊಂದಿರುವ ರಾಜ್ಯವಾದ ಹಿಮಾಚಲ ಪ್ರದೇಶದಿಂದ ನಾನು ಬಂದಿದ್ದು, ಬಹುದಿನಗಳಿಂದ ಬಾಕಿಯುಳಿದಿದ್ದ ‘ಒಂದು ಶ್ರೇಣಿ, ಒಂದು ಪಿಂಚಣಿ’ ಬೇಡಿಕೆಯನ್ನು ನರೇಂದ್ರ ಮೋದಿ ಸರಕಾರ ಪೂರೈಸಿದೆ ಎಂದು ಹೇಳಲು ಬಯಸುತ್ತೇನೆ. ಅಗ್ನಿವೀರ್ ಯೋಜನೆಯು ಶೇ. 100ರಷ್ಟು ಉದ್ಯೋಗವನ್ನು ಖಾತರಿಗೊಳಿಸುತ್ತದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಅವರು ಅಗ್ನಿಪಥ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡರು.
ಆದರೆ, ಅನುರಾಗ್ ಉತ್ತರದಿಂದ ತೃಪ್ತರಾಗದ ಅಖಿಲೇಶ್ ಯಾದವ್, ಒಂದು ವೇಳೆ ಅಗ್ನಿಪಥ ಯೋಜನೆಯು ಇಷ್ಟೊಂದು ಪರಿಣಾಮಕಾರಿಯಾಗಿದ್ದರೆ, ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳಲ್ಲಿ ಶೇ. 10ರಷ್ಟು ಉದ್ಯೋಗ ಮೀಸಲಾತಿ ನೀಡುವ ಅನಿವಾರ್ಯತೆಗೇಕೆ ಕೇಂದ್ರ ಸರಕಾರ ಒಳಗಾಗಿದೆ ಎಂದು ಮರುಪ್ರಶ್ನಿಸಿದರು.
ಅಖಿಲೇಶ್ ಯಾದವ್ ಹಾಗೂ ಅನುರಾಗ್ ಠಾಕೂರ್ ನಡುವಿನ ಮಾತಿನ ಚಕಮಕಿಯಿಂದ ಲೋಕಸಭೆಯಲ್ಲಿ ಗದ್ದಲವೇರ್ಪಟ್ಟಿತು. ಈ ನಡುವೆ, ಅಖಿಲೇಶ್ ಯಾದವ್ ಹಾಗೂ ಅನುರಾಗ್ ಠಾಕೂರ್ ಇಬ್ಬರೂ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡರು.