ಮೊದಲು ಆಪ್, ಈಗ ಸಿಪಿಎಂ | ಪ್ರಕರಣವೊಂದರಲ್ಲಿ ಇನ್ನೊಂದು ರಾಜಕೀಯ ಪಕ್ಷವನ್ನು ಆರೋಪಿಯನ್ನಾಗಿ ಹೆಸರಿಸಲು ಈಡಿ ಸಜ್ಜು

Update: 2024-06-30 12:40 GMT

Photo: Facebook/ED

ಹೊಸದಿಲ್ಲಿ : ತ್ರಿಶೂರಿನ ಕರುವಣ್ಣೂರು ಸಹಕಾರಿ ಬ್ಯಾಂಕಿನಲ್ಲಿ ನೂರಾರು ಕೋಟಿ ರೂ.ಗಳ ದುರ್ಬಳಕೆ ಕುರಿತು ಪ್ರಸ್ತುತ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈಡಿ)ವು ಬ್ಯಾಂಕಿನ ಮೇಲೆ ನಿಯಂತ್ರಣ ಹೊಂದಿರುವ ಸಿಪಿಎಮ್ ಅನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸಲಿದೆ.

ತ್ರಿಶೂರು ಬ್ಯಾಂಕ್ ಪ್ರಕರಣದಲ್ಲಿ ಸಿಬ್ಬಂದಿಗಳು ಅಂದಾಜು 300 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಆಡಳಿತಾರೂಢ ಸಿಪಿಎಂ ನ ಸ್ಥಳೀಯ ಪದಾಧಿಕಾರಿಗಳೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈಡಿ ಪ್ರಕರಣವೊಂದರಲ್ಲಿ ರಾಜಕೀಯ ಪಕ್ಷವನ್ನು ಆರೋಪಿಯನ್ನಾಗಿ ಹೆಸರಿಸುತ್ತಿರುವುದು ಇದು ಎರಡನೇ ನಿದರ್ಶನವಾಗಿದೆ. ಕಳೆದ ತಿಂಗಳು ಈಡಿ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್)ಯನ್ನು ಆರೋಪಿಯನ್ನಾಗಿ ಹೆಸರಿಸಿತ್ತು.

ಕರುವಣ್ಣೂರು ಬ್ಯಾಂಕು ಸಿಪಿಎಂ ಶಾಸಕ ಹಾಗೂ ಮಾಜಿ ಸಚಿವ ಎ.ಸಿ.ಮೊಯಿದೀನ್ ಅವರ ಸೂಚನೆಯಂತೆ ಬೇನಾಮಿ ಸಾಲಗಳನ್ನು ವಿತರಿಸಿದೆ ಎಂದು ಈಡಿ ಕಳೆದ ವರ್ಷ ಹೇಳಿತ್ತು. ಆಗಸ್ಟ್ 2023ರಲ್ಲಿ ಅದು ತ್ರಿಶೂರಿನಲ್ಲಿಯ ಮೊಯಿದೀನ್ ಅವರ ನಿವಾಸದ ಮೇಲೆ ದಾಳಿಯನ್ನು ನಡೆಸಿತ್ತು.

ಮೊಯಿದೀನ್ ಎಲ್ಡಿಎಫ್ ಆಡಳಿತದಲ್ಲಿ 2016ರಿಂದ 2021ರವರೆಗೆ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಸಚಿವರಾಗಿದ್ದರು. ಅದಕ್ಕೂ ಮುನ್ನ ಅವರು ಸಿಪಿಎಂ ತ್ರಿಶೂರು ಜಿಲ್ಲಾ ಕಾರ್ಯದರ್ಶಿಯಾಗಿದ್ದರು.

ಈಡಿ ಸಿಪಿಎಂ ಕಚೇರಿಯ ಭೂಮಿ ಮತ್ತು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಅದು ಹೊಂದಿದ್ದ 60 ಲಕ್ಷ ರೂ.ಗಳನ್ನು ತಾತ್ಕಾಲಿಕವಾಗಿ ವಶಪಡಿಸಿಕೊಂಡಿದೆ.

ಬೆಳವಣಿಗೆಗೆ ಪ್ರತಿಕ್ರಿಯಿಸಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು, ಪಕ್ಷವು ಈ ಪ್ರಕರಣವನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಎದುರಿಸಲಿದೆ. ಪಕ್ಷವನ್ನು ಆರೋಪಿಯನ್ನಾಗಿ ಹೆಸರಿಸುವ ಮೂಲಕ ಈಡಿ ಸಿಪಿಎಂ ಪ್ರಕರಣದಲ್ಲಿ ಭಾಗಿಯಾಗಿದೆ ಎಂಬ ಭಾವನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News