ತಮಿಳುನಾಡಿನ ಹಲವೆಡೆ ಭಾರೀ ಮಳೆ; ದಿಢೀರ್‌ ಪ್ರವಾಹ, 4 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Update: 2023-12-18 08:22 GMT

Photo: PTI

ಚೆನ್ನೈ: ತಮಿಳುನಾಡಿನ ಹಲವೆಡೆ ಇಂದು ಮುಂಜಾನೆಯಿಂದ ಭಾರೀ ಮಳೆಯಾಗುತ್ತಿದೆ. ತಿರುನೆಲ್ವೇಲಿ, ತೂತುಕುಡಿ, ಕನ್ಯಾಕುಮಾರಿ ಮತ್ತು ತೆಂಕಸಿ ಜಿಲ್ಲೆಗಳಲ್ಲಿ ಎಲ್ಲಾ ಶಾಲಾ, ಕಾಲೇಜುಗಳು ಮತ್ತು ಬ್ಯಾಂಕುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ನೀಲಗಿರಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಊಟಿಯಲ್ಲಿ ಭೂಕುಸಿತಗಳು ಸಂಭವಿಸಿವೆ. ಊಟಿ ಮೆಟ್ಟುಪಾಳಯಂ ರಸ್ತೆಯಲ್ಲಿ ಉಂಟಾದ ಭೂಕೂಸಿತದ ಅವಶೇಷಗಳ ತೆರವು ಕಾರ್ಯಾಚರಣೆಯು ಕೇಂದ್ರ ಸಚಿವ ಎಲ್‌ ಮುರುಗನ್‌ ಉಸ್ತುವಾರಿಯಲ್ಲಿ ನಡೆಯಿತು. ತೂತುಕುಡಿಯ ಹಲವೆಡೆ ದಿಢೀರ್‌ ಪ್ರವಾಹ ಉಂಟಾಗಿದೆ. ಇಲ್ಲಿ ಭಾರೀ ಗಾಳಿಮಳೆಯಿಂದಾಗಿ ಹಲವೆಡೆ ಮರಗಳು ಧರಾಶಾಹಿಯಾಗಿವೆ ಹಾಗೂ ವಾಹನಗಳು ಹಾನಿಗೀಡಾಗಿವೆ.

ಮುಂದಿನ ಏಳು ದಿನಗಳವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗಬಹುದೆಂಬ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ತೂತುಕುಡಿ ಜಿಲ್ಲೆಯ ತಿರುಚೆಂಡೂರು ಮತ್ತು ಸತ್ತನಕುಲಂನಲ್ಲಿ ಕಳೆದ 24 ಗಂಟೆಗಳಲ್ಲಿ 606 ಎಂಎಂ ಮಳೆ ದಾಖಲಾಗಿದ್ದರೆ ತಿರುನೆಲ್ವೇಲಿಯ ಪಾಲಯಂಕೊಟ್ಟೈನಲ್ಲಿ 260 ಎಂಎಂ ಮಳೆ ದಾಖಲಾಗಿದೆ.

ತೂತುಕುಡಿ, ದಿಂಡುಗುಲ್‌, ಕೊಯಂಬತ್ತೂರು ಮತ್ತು ತಿರುಪ್ಪುರ್‌ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಕೋವಿಲ್‌ಪಟ್ಟಿ ಪ್ರದೇಶದ 40 ಜಲಮೂಲಗಳು ಉಕ್ಕಿ ಹರಿಯುತ್ತಿವೆ.

ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ಬಾಧಿತ ಜಿಲ್ಲೆಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್‌ ರಾಮಚಂದ್ರನ್‌ ಇಂದು ಸಂಜೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ನೆರೆಪೀಡಿತ ಜನರಿಗೆ ಆಶ್ರಯ ಕಲ್ಪಿಸಲು ವಿವಿಧ ಜಿಲ್ಲೆಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News