ಉತ್ತರಾಖಂಡದಲ್ಲಿ ಮತ್ತೆ ವ್ಯಾಪಕ ಕಾಳ್ಗಿಚ್ಚು; ರಾಣಿಖೇತ್ ಗಾಲ್ಫ್ ಕೋರ್ಸ್ ಬಳಿ ಅಗ್ನಿ ಶಮನಗೊಳಿಸಿದ ಭಾರತೀಯ ಸೇನೆ
ಡೆಹ್ರಾಡೂನ್: ಕೆಲ ದಿನಗಳ ಕಾಲ ನಿಯಂತ್ರಣಕ್ಕೆ ಬಂದಿದ್ದ ಕಾಳ್ಗಿಚ್ಚು ಮತ್ತೆ ಉತ್ತರಾಖಂಡದಲ್ಲಿ ವ್ಯಾಪಕವಾಗಿದೆ. ಕಳೆದ ವಾರಾಂತ್ಯದಲ್ಲಿ ಬೆಂಕಿಯ ಜ್ವಾಲೆ, ಭಾರತೀಯ ಸೇನೆಗೆ ಸೇರಿದ, ಬ್ರಿಟಿಷರ ಕಾಲದ ಐತಿಹಾಸಿಕ ರಾಣಿಖೇತ್ ಗಾಲ್ಫ್ ಕೋರ್ಸ್ನ ತೀರಾ ಸನಿಹಕ್ಕೆ ಬಂದು ಅಪಾಯಕಾರಿ ಸ್ಥಿತಿ ನಿರ್ಮಾಣಾಗಿತ್ತು. ಎರಡೂವರೆ ಗಂಟೆಗಳ ತೀವ್ರ ಹೋರಾಟದ ಬಳಿಕ ಬೆಂಕಿಯನ್ನು ಶಮನಗೊಳಿಸಲಾಯಿತು ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಬೆಂಕಿಯ ಜ್ವಾಲೆ ರಾಣಿಖೇತ್ ಸೇನಾ ಆಸ್ಪತ್ರೆಯನ್ನು ತಲುಪಿತ್ತು.
"ಬೆಂಕಿಯ ಜ್ವಾಲೆ ಆಸ್ಪತ್ರೆಯ ಫ್ಯಾಮಿಲಿ ವಾರ್ಡ್ ತನಕ ತಲುಪಿದ್ದು, ಆ ಬಳಿಕ ಕಮಾಂಡೆಂಟ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಬೆಂಕಿಯ ವಿರುದ್ಧದ ಹೋರಾಟಕ್ಕೆ ಧುಮುಕಿದರು. ಇದೇ ವೇಳೆ ಅದು ಆಸ್ಪತ್ರೆ ಬಳಿಯ ನಾಗರಿಕರ ಮನೆಗಳಿಗೂ ವ್ಯಾಪಿಸಿತು" ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಯ ಜತೆಗೆ 130 ಮಂದಿ ಸೇನಾ ಸಿಬ್ಬಂದಿ ಕೂಡಾ ಹಲವು ಗಂಟೆಗಳ ಕಾಲ ಬೆಂಕಿಯ ವಿರುದ್ಧ ಹೋರಾಡಿದರು. "ಸಂಭಾವ್ಯ ದೊಡ್ಡ ಅನಾಹುತವಾಗುವ ಮುನ್ನ ಸೇನೆ ಹಾಗೂ ನಮ್ಮ ಸಿಬ್ಬಂದಿ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು" ಎಂದು ರಾಣಿಖೇತ್ ಅಗ್ನಿಶಾಮಕ ಅಧಿಕಾರಿ ವಂಶನಾರಾಯಣ ವಿವರಿಸಿದ್ದಾರೆ.
ಭಾನುವಾರ ಸಂಜೆ ಭಾರತೀಯ ಸೇನೆಯ ರಾಣಿಖೇತ್ ಫೈರಿಂಗ್ ರೇಂಜ್ ಬಳಿಯ ಅರಣ್ಯದಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಹಲವು ಗಂಟೆಗಳ ಕಾಲ ಅಗ್ನಿಶಮನಕ್ಕೆ ಶ್ರಮಿಸಲಾಯಿತು. ಅಂತೆಯೇ ಬಗ್ವಾಲಿಪೋಖರ್ ಪ್ರದೇಶದಲ್ಲಿ ಕಾಳ್ಗಿಚ್ಚಿನಿಂದ ಸರ್ಕಾರಿ ಶಾಲೆ ಭಸ್ಮವಾಗಿದೆ.