ಮಧ್ಯಪ್ರದೇಶ| ಹುಲಿ ಮರಿಗಳ ಸಾವಿಗೆ ಕಾರಣವಾದ ರೈಲನ್ನು ವಶಪಡಿಸಿಕೊಳ್ಳಲು ಮುಂದಾದ ಅರಣ್ಯ ಇಲಾಖೆ
ಭೋಪಾಲ್: ರತಪಾನಿ ವನ್ಯಜೀವಿಗಳ ಮೃಗಾಲಯವನ್ನು ಹಾದು ಹೋಗುವ ಮಿಡ್ ಘಾಟ್-ಬುಧ್ನಿ ರೈಲ್ವೆ ಹಳಿಯ ಮೇಲೆ ಹಾದು ಹೋಗುವ ರೈಲಿಗೆ ಸಿಲುಕಿ ಮೂರು ಹುಲಿ ಮರಿಗಳು ಮೃತಪಟ್ಟಿದ್ದು, ಈ ಘಟನೆಗೆ ಕಾರಣವಾದ ರೈಲನ್ನು ವಶಪಡಿಸಿಕೊಳ್ಳುವ ಕುರಿತು ಮಧ್ಯಪ್ರದೇಶ ಅರಣ್ಯ ಇಲಾಖೆಯು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಹುಲಿಗಳ ರಾಜ್ಯವಾದ ಮಧ್ಯಪ್ರದೇಶದ ಅರಣ್ಯಾಧಿಕಾರಿಗಳು ಅಕ್ಟೋಬರ್, 2020ರಲ್ಲಿ ಆನೆ ಹಾಗೂ ಆನೆಯ ಮರಿಯ ಸಾವಿಗೆ ಕಾರಣವಾಗಿದ್ದ ರೈಲು ಇಂಜಿನ್ ಅನ್ನು ಅಸ್ಸಾಂ ಸರಕಾರ ವಶಪಡಿಸಿಕೊಂಡಂತೆ, ತಾವೂ ಕೂಡಾ ಈ ಸಂಬಂಧ ನಿರ್ಣಾಯಕ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೂರು ಹುಲಿ ಮರಿಗಳ ಸಾವಿನಿಂದ ತೀವ್ರವಾಗಿ ಆಕ್ರೋಶಿತಗೊಂಡಿರುವ ಮಧ್ಯಪ್ರದೇಶ ಅರಣ್ಯಾಧಿಕಾರಿಗಳು, ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಭಾವಿಸಿದ್ದಾರೆ. ಜುಲೈ 14ರ ರಾತ್ರಿ ರೈಲೊಂದು ಈ ಹುಲಿ ಮರಿಗಳಿಗೆ ಢಿಕ್ಕಿ ಹೊಡೆದಿತ್ತು. ಒಂದು ಹುಲಿ ಮರಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನೆರಡು ಹುಲಿ ಮರಿಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದವು.