ಆಸ್ಟ್ರೇಲಿಯದಲ್ಲಿ ಬಿಗ್ ಬ್ಯಾಶ್ ನಲ್ಲಿ ಮಿಂಚುತ್ತಿರುವ ಭಾರತದ ಮಾಜಿ ಅಂಡರ್-19 ಸ್ಟಾರ್ ನಿಖಿಲ್ ಚೌಧರಿ
ಹೊಸದಿಲ್ಲಿ: ಹೊಬರ್ಟ್ ಹರಿಕೇನ್ಸ್ ಪರ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಭಾರತದ ಮೂಲದ ಆಲ್ರೌಂಡರ್ ನಿಖಿಲ್ ಚೌಧರಿ ಈಗ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ನಲ್ಲಿ (ಬಿಬಿಎಲ್) ಹೊಸ ಅಲೆ ಎಬ್ಬಿಸಿ ಉದಯೋನ್ಮುಖ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
27ರ ಹರೆಯದ ನಿಖಿಲ್ ಈ ಹಿಂದೆ ಅಂಡರ್-19 ಕ್ರಿಕೆಟ್ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮೆಲ್ಬರ್ನ್ ಸ್ಟಾರ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ 32 ರನ್ ಗಳಿಸಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದರು. ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಸುದ್ದಿಯಾಗಿರುವ ಲೆಗ್ ಸ್ಪಿನ್ನರ್ ನಿಖಿಲ್ ಬೌಲಿಂಗ್ ನಲ್ಲಿ ಮಿಂಚುಹರಿಸಿ ಎರಡು ವಿಕೆಟ್ ಪಡೆದು ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.
ದಿಲ್ಲಿಯಲ್ಲಿ ಜನಿಸಿರುವ ನಿಖಿಲ್ ಎಳೆಯ ವಯಸ್ಸಿನಲ್ಲಿ ತನ್ನ ಹೆತ್ತವರ ಜೊತೆಗೆ ಪಂಜಾಬ್ ಗೆ ತೆರಳಿದ್ದರು. ಶಾಲಾ ದಿನಗಳಲ್ಲಿ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರಂತೆಯೇ ಬೌಲಿಂಗ್ ಮಾಡುತ್ತಿದ್ದ ನಿಖಿಲ್ ವೇಗದ ಬೌಲರ್ ಆಗಬೇಕೆಂಬ ಕನಸು ಕಂಡಿದ್ದರು.
ವೇಗದ ಬೌಲರ್ ಆಗಬೇಕೆಂಬ ನಿಖಿಲ್ ಕನಸು ಈಡೇರಲಿಲ್ಲ. ಆಲ್ರೌಂಡರ್ ಆಗಿ ಅಂಡರ್-19 ಕ್ರಿಕೆಟ್ ತಂಡದಲ್ಲಿ ಯಶಸ್ಸು ಕಂಡರು. ಹಭರ್ಜನ್ ಸಿಂಗ್ ನಾಯಕತ್ವದ ಪಂಜಾಬ್ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿದ್ದರು. ಪಂಜಾಬ್ ತಂಡದಲ್ಲಿದ್ದಾಗ ದಿಗ್ಗಜ ಆಟಗಾರರಾದ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಜೊತೆ ಆಡಿರುವ ಅನುಭವ ಅವರ ನೆರವಿಗೆ ಬಂತು.
ಇನಿಂಗ್ಸ್ ಹೇಗೆ ಕಟ್ಟಬೇಕು, ದೊಡ್ಡ ಗುರಿಯನ್ನು ಹೇಗೆ ಬೆನ್ನಟ್ಟಬೇಕು ಸೇರಿದಂತೆ ಹಲವು ವಿಚಾರಗಳನ್ನು ನಾನು ಹರ್ಭಜನ್ ಹಾಗೂ ಯುವರಾಜ್ ರಿಂದ ಕಲಿತುಕೊಂಡೆ. ಪಂದ್ಯದ ಯಾವುದೇ ಹಂತದಲ್ಲಿ ರನ್ ಗಳಿಸುವ ಸಾಮರ್ಥ್ಯವಿದೆ ಎಂಬ ಅರಿವು ನನಗಿತ್ತು. ನನಗೆ ಐಪಿಎಲ್ ಹಾಗೂ ಭಾರತದ ಪರ ಆಡಬೇಕೆಂಬ ಆಸೆ ಇದೆ ಎಂದು ನಿಖಲ್ ಹೇಳಿದ್ದಾರೆ.
2019ರಲ್ಲಿ ನಿಖಿಲ್ ಎರಡು ಬಾರಿ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರಯಲ್ಸ್ ನೀಡಿದ್ದರು. ಆದರೆ ಐಪಿಎಲ್ ತಂಡಕ್ಕೆ ಆಯ್ಕೆಯಾಗಲಿಲ್ಲ. ತನ್ನ ಕುಟುಂಬದೊಂದಿಗೆ ಆಸ್ಟ್ರೇಲಿಯದ ಬ್ರಿಸ್ಬೇನ್ ಗೆ ರಜೆಯಲ್ಲಿ ತೆರಳಿದ್ದಾಗ ನಿಖಿಲ್ ಕ್ರಿಕೆಟ್ ಪಯಣಕ್ಕೆ ಅನಿರೀಕ್ಷಿತ ತಿರುವು ಲಭಿಸಿತು . ಕೋವಿಡ್-19ನಿಂದಾಗಿ ಗಡಿಗಳು ಮುಚ್ಚಲ್ಪಟ್ಟಾಗ ಕ್ರಿಕೆಟಿಗ ನಿಖಿಲ್ ಆಸ್ಟ್ರೇಲಿಯದಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ಯತ್ನಿಸಿದರು.
ಆಸ್ಟ್ರೇಲಿಯ ಪೋಸ್ಟ್ ನಲ್ಲಿ ಕೋರಿಯರ್ ಆಗಿ ಕೆಲಸ ಮಾಡುವಾಗ ನಿಖಿಲ್ ಉತ್ತರ ಉಪನಗರಗಳ ಪರ ಕ್ಲಬ್ ಕ್ರಿಕೆಟ್ ಆಡಲಾರಂಭಿಸಿದರು. ಆಗ ಆಸ್ಟ್ರೇಲಿಯದ ಮಾಜಿ ಕೋಚ್ ಜೇಮ್ಸ್ ಹೋಪ್ಸ್ ಗಮನ ಸೆಳೆದರು. ಹೋಪ್ಸ್ ಅವರು ಹೊಬರ್ಟ್ ಹರಿಕೇನ್ಸ್ ಗೆ ನಿಖಿಲ್ ಹೆಸರು ಶಿಫಾರಸು ಮಾಡಿದರು. ಹೀಗಾಗಿ ನಿಖೀಲ್ ಬಿಬಿಎಲ್ ಗುತ್ತಿಗೆಯನ್ನು ಗಿಟ್ಟಿಸಿಕೊಂಡರು.
ಪರಿಣಾಮವಾಗಿ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಂದ್ ಬಳಿಕ ಬಿಬಿಎಲ್ ನಲ್ಲಿ ಆಡಿದ ಭಾರತ ಮೂಲದ 2ನೇ ಕ್ರಿಕೆಟಿಗ ಎನಿಸಿಕೊಂಡರು. ಅತ್ಯಂತ ಕಡಿಮೆ ಅವಧಿಯಲ್ಲಿ ಹೊಬರ್ಟ್ ತಂಡದ ಅಮೂಲ್ಯ ಆಸ್ತಿ ಎಂದು ಸಾಬೀತುಪಡಿಸಿದ್ದಾರೆ.