ಜಮ್ಮು-ಕಾಶ್ಮೀರದ ಮಾಜಿ ಸಚಿವ ಲಾಲಸಿಂಗ್ ಪತ್ನಿಯ ಶೈಕ್ಷಣಿಕ ಟ್ರಸ್ಟ್ ಮೇಲೆ ಈಡಿ ದಾಳಿ

Update: 2023-10-17 17:04 GMT

Photo: Facebook/Lal Singh

ಜಮ್ಮು : ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಮ್ಮು-ಕಾಶ್ಮೀರದ ಮಾಜಿ ಸಚಿವ ಲಾಲಸಿಂಗ್ ಅವರ ಪತ್ನಿ ಕಾಂತಾ ಅಂದೋತ್ರಾ ಮತ್ತು ಮಾಜಿ ಸರಕಾರಿ ಅಧಿಕಾರಿ ರವೀಂದ್ರ ಎಸ್.ನಡೆಸುತ್ತಿರುವ ಶೈಕ್ಷಣಿಕ ಟ್ರಸ್ಟ್‌ನ ಮೇಲೆ ಮಂಗಳವಾರ ದಾಳಿ ನಡೆಸಿ ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಟ್ರಸ್ಟ್ ಸ್ಥಾಪನೆಗಾಗಿ ಜಮೀನು ಖರೀದಿಯಲ್ಲಿ ಅವ್ಯವಹಾರ ಆರೋಪಗಳಿಗೆ ಈ ದಾಳಿಯು ಸಂಬಂಧಿಸಿದೆ.

ಆರ್‌ಬಿ ಎಜ್ಯುಕೇಷನಲ್ ಟ್ರಸ್ಟ್, ಅದರ ಅಧ್ಯಕ್ಷೆ ಅಂದೋತ್ರಾ ಮತ್ತು ರವೀಂದ್ರ ಎಸ್.ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಡಿ ಜಮ್ಮು, ಕಥುವಾ ಮತ್ತು ಪಂಜಾಬಿನ ಪಠಾಣಕೋಟ್‌ಗಳಲ್ಲಿಯ ಸುಮಾರು ಎಂಟು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿದೆ.

2021ರಲ್ಲಿ ಸಿಬಿಐ ಪ್ರಕರಣದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಆಧರಿಸಿ ಈಡಿ ಪ್ರಕರಣ ದಾಖಲಾಗಿದೆ. 2011ರಲ್ಲಿ, ಜಮ್ಮು-ಕಾಶ್ಮೀರ ಕೃಷಿ ಸುಧಾರಣಾ ಕಾಯ್ದೆ, 1976ರ ಕಲಂ 14ರಡಿ ಹೇರಲಾಗಿರುವ ಭೂಮಿತಿಯನ್ನು ಉಲ್ಲಂಘಿಸಿ ಟ್ರಸ್ಟ್ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವುದರಲ್ಲಿ ಕ್ರಿಮಿನಲ್ ಒಳಸಂಚು ನಡೆದಿತ್ತು ಮತ್ತು ಟ್ರಸ್ಟ್‌ಗೆ ಅನುಚಿತ ಹಣಕಾಸು ಲಾಭವನ್ನು ಒದಗಿಸಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.

ಟ್ರಸ್ಟ್ ಮಿತಿಗಿಂತ ಹೆಚ್ಚಿನ ಭೂಮಿಯಲ್ಲಿ ಡಿಪಿಎಸ್ ಶಾಲೆಗಳನ್ನು ಮತ್ತು ಇತರ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ಈಡಿ ಪತ್ತೆ ಹಚ್ಚಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News