ಪಶ್ಚಿಮ ಬಂಗಾಳದ ನಾಲೆಯೊಂದರಲ್ಲಿ ಸಿಕ್ಕಿಂ ಮಾಜಿ ಸಚಿವರ ಮೃತದೇಹ ಪತ್ತೆ
ಗ್ಯಾಂಗ್ಟಕ್: ಸಿಕ್ಕಿಂನ ಮಾಜಿ ಸಚಿವ ಆರ್.ಸಿ.ಪೌಡ್ಯಾಲ್ ಮೃತದೇಹವು ಪಶ್ಚಿಮ ಬಂಗಾಳದ ಸಿಲಿಗುರಿ ಬಳಿಯ ನಾಲೆಯೊಂದರಲ್ಲಿ ಪತ್ತೆಯಾಗಿದೆ. ಅವರು ಒಂಬತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದರು ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಫುಲ್ಬರಿಯಲ್ಲಿನ ತೀಸ್ತಾ ನಾಲೆಯಲ್ಲಿ 80 ವರ್ಷ ವಯಸ್ಸಿನ ಪೌಡ್ಯಾಲ್ ಅವರ ಮೃತದೇಹ ತೇಲುತ್ತಿತ್ತು ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, "ಮೇಲ್ನೋಟಕ್ಕೆ ನದಿಯ ಮೇಲ್ಭಾಗದಿಂದ ಅವರ ಮೃತದೇಹವು ತೀಸ್ತಾ ನದಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಅವರು ತೊಟ್ಟಿದ್ದ ಕೈಗಡಿಯಾರ ಹಾಗೂ ಬಟ್ಟೆಗಳ ಮೂಲಕ ಅವರ ಗುರುತನ್ನು ಪತ್ತೆ ಹಚ್ಚಲಾಯಿತು" ಎಂದು ಮಾಹಿತಿ ನೀಡಿದ್ದಾರೆ.
ಜುಲೈ 7ರಂದು ಹಿರಿಯ ರಾಜಕಾರಣಿಯಾದ ಪೌಡ್ಯಾಲ್ ಪಾಕ್ಯಾಂಗ್ ಜಿಲ್ಲೆಯ ತಮ್ಮ ಸ್ವಗ್ರಾಮವಾದ ಛೋಟಾ ಸಿಂಗ್ಟಮ್‌ನಿಂದ ನಾಪತ್ತೆಯಾದ ನಂತರ, ಅವರ ಶೋಧಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಪೌಡ್ಯಾಲ್ ಸಾವಿನ ಕುರಿತು ತನಿಖೆ ಮುಂದುವರಿಯುವುದು ಎಂದು ಅವರು ಹೇಳಿದ್ದಾರೆ.
ಆರ್.ಸಿ.ಪೌಡ್ಯಾಲ್ ಅವರು ಮೊದಲ ಸಿಕ್ಕಿಂ ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದರು. ನಂತರ, ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.