ಪಾಕ್-ಬಾಂಗ್ಲಾ ಪಂದ್ಯದ ವೇಳೆ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ನಾಲ್ವರು ಪೊಲೀಸ್ ವಶಕ್ಕೆ
ಕೋಲ್ಕತ್ತಾ: ಮಂಗಳವಾರ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ-ಬಾಂಗ್ಲಾದೇಶ ನಡುವೆ ನಡೆದ ವಿಶ‍್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ಕಾರಣಕ್ಕೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಪ್ರಾಥಮಿಕ ವಿಚಾರಣೆಯ ನಂತರ ಎಲ್ಲ ನಾಲ್ವರೂ ಮೈದಾನ್ ಪೊಲೀಸ್ ಠಾಣೆಯಿಂದ ಹೊರ ನಡೆದರು. ಅವರೆಲ್ಲ ಬ್ಯಾಲಿ, ಏಕ್ಬಲ್ಪೋರ್ ಹಾಗೂ ಕರಯ ಪೊಲೀಸ್ ಠಾಣೆ ವ್ಯಾಪ್ತಿಗಳ ನಿವಾಸಿಗಳು” ಎಂದು ತಿಳಿಸಿದ್ದಾರೆ.
“ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ಕಾರಣಕ್ಕೆ ನಾವು ಅವರನ್ನು ವಶಕ್ಕೆ ಪಡೆದೆವು” ಎಂದು ಆ ಐಪಿಎಸ್ ಅಧಿಕಾರಿಯು ಹೇಳಿದ್ದಾರೆ.
“ಪ್ರತಿಭಟನಾಕಾರರು ಏನು ಮಾಡುತ್ತಿದ್ದಾರೆ ಎಂಬುದು ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಿಯೋಜಿಸಲಾಗಿದ್ದ ಪೊಲೀಸರಿಗೆ ಆರಂಭದಲ್ಲಿ ಅರ್ಥವಾಗಲಿಲ್ಲ. ನಂತರ ಅವರನ್ನು ವಶಕ್ಕೆ ಪಡೆಯುವುದಕ್ಕೂ ಮುನ್ನ ಅವರೆಲ್ಲ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದರು. ಆದರೆ, ಅವರು ಯಾವುದೇ ಘೋಷಣೆಯನ್ನು ಕೂಗಲಿಲ್ಲ” ಎಂದೂ ಅವರು ತಿಳಿಸಿದ್ದಾರೆ.
20ರ ಮಧ್ಯವಯಸ್ಸಿನವರಾದ ಆ ನಾಲ್ವರೂ ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವಿನ ಕದನದ ವಿರುದ್ಧ ಪ್ರತಿಭಟಿಸುತ್ತಿದ್ದರು ಹಾಗೂ ತಮ್ಮ ಧರಣಿಗಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯ್ದುಕೊಂಡಿದ್ದರು ಎಂಬ ಸಂಗತಿ ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ ಕೋಲ್ಕತ್ತಾ ಪೊಲೀಸ್ ಮೂಲಗಳು ಹೇಳಿವೆ.