ʼಕೋಟ್ಯಾಧಿಪತಿʼಗಳಾಗಲು ಸ್ನೇಹಿತನ ಶಿರಚ್ಛೇದ : ವಾಮಾಚಾರಿಗಳು ಸೇರಿ ನಾಲ್ವರ ಬಂಧನ
ನೋಯ್ಡಾ: ಉತ್ತರಪ್ರದೇಶದ ನೋಯ್ಡಾದಲ್ಲಿ ಕೋಟ್ಯಾಧಿಪತಿಗಳಾಗಲು ಯುವಕನೋರ್ವನನ್ನು ಆತನ ಸ್ನೇಹಿತರೇ ಶಿರಚ್ಛೇದ ಮಾಡಿ ವಾಮಾಚಾರಿಗಳಿಗೊಪ್ಪಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನೋಯ್ಡಾದ ತಿಲಾ ಮೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಲೋಣಿ-ಭೋಪ್ರಾ ರಸ್ತೆಯ ಚರಂಡಿಯ ಬಳಿ ಜೂನ್ 22ರಂದು ರಾಜು ಕುಮಾರ್ ಸಾಹ್ ಎಂಬಾತನ ಶಿರಚ್ಛೇದಿತ ಮೃತದೇಹ ಪತ್ತೆಯಾಗಿತ್ತು. ಆಗಸ್ಟ್ 15ರಂದು ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕ ವಿಕಾಸ್ ಗುಪ್ತಾ ಮತ್ತು ಧನಂಜಯ ಸೆಹ್ನಿ ಅವರನ್ನು ಬಂಧಿಸಲಾಗಿತ್ತು. ಶನಿವಾರದಂದು ಪೊಲೀಸರು ರಾಜು ಕುಮಾರ್ ಸಾಹ್ ಕೊಲೆಗೆ ಸಂಬಂಧಿಸಿದಂತೆ ವಿಕಾಸ್ ಪರಮಾತ್ಮ(24), ನರೇಂದ್ರ ಅಲಿಯಾಸ್ ಎನ್ ಡಿ (32) ಮತ್ತು ಪವನ್ ಕುಮಾರ್ (40) ಮತ್ತು ಪಂಕಜ್(33) ಅವರನ್ನು ಬಂಧಿಸಿದ್ದಾರೆ. ಪವನ್ ಕುಮಾರ್ ಮತ್ತು ಪಂಕಜ್ ವಾಮಾಚಾರಿಗಳಾಗಿದ್ದರು ಮತ್ತು ಮಾನವ ತಲೆ ಬುರುಡೆ ಬಳಸಿ ವಾಮಾಚಾರ ಮಾಡಿದರೆ 50-60 ಕೋಟಿ ರೂ. ಗಳಿಸಬಹುದು ಎಂದು ಭರವಸೆ ನೀಡಿದ್ದರು ಎನ್ನುವುದು ತನಿಖೆಯಿಂದ ಬಯಲಾಗಿದೆ ಎಂದು ಡಿಸಿಪಿ ನಿಮಿಷ್ ಪಾಟೀಲ್ ಹೇಳಿದ್ದಾರೆ.
ದಿಲ್ಲಿಯ ಜಿಟಿಬಿ ಆಸ್ಪತ್ರೆಯಲ್ಲಿ ಲಿಫ್ಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ನರೇಂದ್ರನನ್ನು ಕೃತ್ಯಕ್ಕೆ ಒಂದು ತಿಂಗಳ ಮೊದಲು ಇನ್ನೋರ್ವ ಆರೋಪಿ ವಿಕಾಸ್ ಪರಮಾತ್ಮ ಭೇಟಿಯಾಗಿದ್ದ. ನರೇಂದ್ರ ವಾಮಾಚಾರಿಗಳಾದ ಪವನ್ ಕುಮಾರ್ ಮತ್ತು ಪಂಕಜ್ ಅವರನ್ನು ವಿಕಾಸ್ ಪರಮಾತ್ಮನಿಗೆ ಪರಿಚಯಿಸಿದ್ದ. ಅವರು ಶಿರಚ್ಛೇದ ಮಾಡಿ ವಾಮಾಚಾರ ಮಾಡಿದರೆ ಕೋಟ್ಯಾಧಿಪತಿಗಳಾಗಬಹುದು ಎಂದು ವಿಕಾಸ್ ಗೆ ಆಮಿಷವೊಡ್ಡಿದ್ದಾರೆ. ಈ ವೇಳೆ ಯಾರ ಶಿರಚ್ಚೇದ ಮಾಡುವುದು ಎಂಬ ಪ್ರಶ್ನೆ ವಿಕಾಸ್ ಗೆ ಮೂಡಿದೆ. ಕೊನೆಗೆ ಜೂನ್ 15ರಂದು ದಿಲ್ಲಿಯ ಕಮಲಾ ಮಾರುಕಟ್ಟೆ ಬಳಿಯ ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಮೋತಿಹಾರಿ ಮೂಲದ ರಾಜು ಕುಮಾರ್ ಸಾಹ್ ನನ್ನು ಕೊಲೆ ಮಾಡಲು ವಿಕಾಸ್ ಮತ್ತು ಇತರರು ತೀರ್ಮಾನಿಸಿದ್ದಾರೆ. ರಾಜು ಕುಮಾರ್ ಸಾಹ್ ಕಳೆದ 15 ವರ್ಷಗಳಿಂದ ಅನಾಥನಾಗಿದ್ದ. ಆದ್ದರಿಂದಲೇ ಆತನನ್ನು ಗುರಿಯಾಗಿಸಲಾಗಿದೆ.
ಜೂನ್ 21ರಂದು, ಪರಮತ್ಮಾ ದಿಲ್ಲಿಯ ತಾಹಿರ್ ಪುರದಲ್ಲಿರುವ ತನ್ನ ಬಾಡಿಗೆ ಮನೆಗೆ ಡ್ರಿಂಕ್ಸ್ ಪಾರ್ಟಿಯಿದೆ ಎಂದು ರಾಜು ಕುಮಾರ್ ಸಾಹ್ ನನ್ನು ಕರೆಸಿ ಆತನ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆತನ ದೇಹವನ್ನು ತಿಲಾ ಮೋಡ್ ಗೆ ಸಾಗಿಸಿ ಸಾಹ್ ನ ಶಿರಚ್ಛೇದ ಮಾಡಿ, ತಲೆಬುರುಡೆಯನ್ನು ಇಟ್ಟುಕೊಂಡು ದೇಹವನ್ನು ವಿಲೇವಾರಿ ಮಾಡಿದ್ದಾರೆ. ಬಳಿಕ ತಲೆ ಬುರುಡೆಯನ್ನು ಸ್ವಚ್ಛಗೊಳಿಸಿ ವಾಮಾಚಾರಿಗಳಿಗೆ ತಲುಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ತಿಲಾ ಮೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ, ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.