ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯಿಂದ ಹಣ ವಂಚನೆ
ದಿಲ್ಲಿ : ಬಂಬಲ್ ಡೇಟಿಂಗ್ ಆ್ಯಪ್ ಮೂಲಕ ತಾನು ಪರಿಚಯವಾದ ಮಹಿಳೆಯೊಂದಿಗೆ ರಜೌರಿ ಗಾರ್ಡನ್‌ನಲ್ಲಿರುವ ಬಾರ್ಗೆ ತೆರಳಿದ್ದ ತನಗೆ 15 ಸಾವಿರ ರೂ.ಗೂ ಅಧಿಕ ಮೊತ್ತದ ಬಿಲ್‌ಪಾವತಿಸುವಂತೆ ಮಾಡಿ ಮೋಸಗೊಳಿಸಲಾಗಿದೆಯೆಂದು ದಿಲ್ಲಿಯ ಪತ್ರಕರ್ತರೊಬ್ಬರು ಆಪಾದಿಸಿದ್ದಾರೆ.
ಪತ್ರಕರ್ತರಾದ ಅರ್ಚಿತ್ ಗುಪ್ತಾ ಅವರು ಯುವತಿಯ ಜೊತೆ ಬಾರ್‌ಗೆ ತೆರಳಿದ್ದು, ಆಕೆಗಾಗಿ ಪಾನೀಯಗಳನ್ನು ಆರ್ಡರ್ ಮಾಡಿದ್ದರು. ಆದರೆ 15,886 ರೂ. ಮೊತ್ತದ ಬಿಲ್ ಬಂದಾಗ ಅರ್ಚಿತ್ ಹೌಹಾರಿದ್ದರು. ಆದರೂ ಒಲ್ಲದ ಮನಸ್ಸಿನಿಂದ ಹಣ ಪಾವತಿಸಿದರು. ಬಳಿಕ ತಾನು ಸಹೋದರ ಜೊತೆ ತೆರಳುತ್ತಿರುವುದಾಗಿ ಮಹಿಳೆಯು ಸ್ಥಳದಿಂದ ನಿರ್ಗಮಿಸಿದ ಆನಂತರ ತಾನು ಮೋಸಹೋಗಿರುವುದು ಗುಪ್ತಾಗೆ ಮನವರಿಕೆಯಾಯಿತು. ಆ ಬಳಿಕ ಮಹಿಳೆಗೆ ತಾನು ಕರೆ ಮಾಡಿದ ಹೊರತಾಗಿಯೂ ಆಕೆ ಅವನ್ನು ಸ್ವೀಕರಿಸದೆ ಇದ್ದುದು ತನ್ನ ಸಂದೇಹವನ್ನು ಬಲಪಡಿಸಿತು ಎಂದು ಗುಪ್ತಾ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
‘‘ಆಕೆ ನನ್ನನ್ನು ಬಾರ್‌ಗೆ ಕರೆದೊಯ್ದಳು. ಆಕೆಗಾಗಿ ಕೆಲವು ಡ್ರಿಂಕ್‌ಗಳನ್ನು ಆರ್ಡರ್ ಮಾಡಿದ್ದಳು. ನಾನು ಮದ್ಯಸೇವಿಸುವುದಿಲ್ಲ. ಹೀಗಾಗಿ ನಾನು ರೆಡ್‌ಬುಲ್ ಲಘುಪಾನೀಯವನ್ನು ಆರ್ಡರ್ ಮಾಡಿದೆ. ಒಂದು ಹುಕ್ಕಾ, 2-3 ಗ್ಲಾಸ್ ವೈನ್, ವೊಡ್ಕಾ ಶಾಟ್, ಚಿಕನ್ ಟಿಕ್ಕಾ ಹಾಗೂ ಒಂದು ನೀರಿನ ಬಾಟಲ್ ಸೇರಿ ಒಟ್ಟು 15,886 ರೂ.ಬಿಲ್ ಬಂದಿತ್ತು ಎಂದು ಗುಪ್ತಾ ಟ್ವೀಟ್ ಮಾಡಿದ್ದಾರೆ.
ಬಿಲ್ ನೋಡಿ ನನಗೆ ಶಾಕ್ ಆಯಿತು. ಆದರೂ ನಾನು ಬಿಲ್ ಪಾವತಿಸಿದೆ. ಸ್ಥಳವನ್ನು ತೊರೆಯುವ ಮುನ್ನ ನಾನು ವಾಶ್‌ರೂಮ್‌ಗೆ ತೆರಳಿದ್ದೆ. ವಾಪಾಸಾಗುವಾಗ ನಾನು ಇರಿಸಿದ್ದ ಬಿಲ್ ಇರಲಿಲ್ಲ’’ ಎಂದು ಆತ ಹೇಳಿಕೊಂಡಿದ್ದಾರೆ.
ತನ್ನನ್ನು ಕರೆದೊಯ್ಯಲು ಸಹೋದರ ಬರುತ್ತಿದ್ದಾನೆ. ಈಗಲೇ ತೆರಳಬೇಕಾಗಿದೆಯೆಂದು ಆಕೆ ಹೇಳಿದಳು. ಮನೆಗೆ ವಾಪಾಸಾದಾಗ ಇದೊಂದು ಮಹಾಮೋಸವೆಂಬುದಾಗಿ ನನಗೆ ಅರಿವಾಯಿತು. ಆಕೆ ನಾಪತ್ತೆಯಾಗಿದ್ದು, ತನ್ನ ಕರೆಗಳನ್ನು ಕೂಡಾ ಸ್ವೀಕರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ದಿಲ್ಲಿಯ ಸೈಬರ್ ಪೊಲೀಸ್ ದಳಕ್ಕೆ ದೂರು ನೀಡಿದಾಗ ಅದರ ಸಹಾಯವಾಣಿ ಸಂಖ್ಯೆ 1930 ಕಾರ್ಯನಿರ್ವಹಿಸದೆ ಇರುವುದು ಗೊತ್ತಾಯಿತು. ಬಳಿಕ ತಾನು ದಿಲ್ಲಿ ಪೊಲೀಸರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವುದಾಗಿ ಗುಪ್ತಾ ಎಕ್ಸ್‌ನಲ್ಲಿ ಹೇಳಿದ್ದಾರೆ.
ದಿಲ್ಲಿಯ ಕೆಫೆಗಳು ಹಾಗೂ ಕ್ಲಬ್‌ಗಳಲ್ಲಿ ವ್ಯಾಪಕ ವಂಚನೆಗಳ ಪ್ರಕರಣಗಳು ನಡೆಯುತ್ತಿವೆಯೆಂದು ಅವರು ಹೇಳಿದ್ದಾರೆ.
ಕೇವಲ ಒಂದು ತಿಂಗಳ ಹಿಂದೆ ದಿಲ್ಲಿಯ ಇನ್ನೊಬ್ಬ ವ್ಯಕ್ತಿ ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಪರಿಚವಾದ ಮಹಿಳೆಯಿಂದ 14 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದರು. ಗುಪ್ತಾ ತನ್ನ ಡೇಟಿಂಗ್ ಗೆಳತಿಯನ್ನು ಭೇಟಿಯಾದ ರಜೌರಿ ಗಾರ್ಡನ್ ಪ್ರದೇಶದಲ್ಲಿಯೇ ಆತ ಕೂಡಾ ಆ ಮಹಿಳೆಯನ್ನು ಭೇಟಿಯಾಗಿದ್ದರು.