ಇನ್ನು ಮುಂದೆ GNSS ಅಳವಡಿಸಿರುವ ಖಾಸಗಿ ವಾಹನಗಳಿಗೆ ಹೆದ್ದಾರಿಗಳಲ್ಲಿ ʼಟೋಲ್ ಫ್ರೀʼ!
ಹೊಸದಿಲ್ಲಿ: GPS ನ ಸುಧಾರಿತ ರೂಪ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (GNSS) ಹೊಂದಿದ ಖಾಸಗಿ ವಾಹನಗಳ ಮಾಲಕರಿಗೆ ದಿನಕ್ಕೆ 20 ಕಿಮೀವರೆಗೆ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಯಾಣಿಸಲು ಯಾವುದೇ ಮೊತ್ತವನ್ನು ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಸೂಚನೆಯೊಂದು ತಿಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮಂಗಳವಾರ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ನಿಯಮಗಳು, 2008 ಅನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ.
ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ತಿದ್ದುಪಡಿ ನಿಯಮಗಳು, 2024 ಎಂದು ಕರೆಯಲ್ಪಡುವ ಹೊಸ ನಿಯಮಗಳ ಅಡಿಯಲ್ಲಿ, ಹೆದ್ದಾರಿಯಲ್ಲಿ 20 ಕಿಲೋಮೀಟರ್‌ಗಳನ್ನು ಮೀರಿ ಪ್ರಯಾಣಿಸಿದರೆ ಮಾತ್ರ GNSS ಅಳವಡಿಸಿರುವ ಖಾಸಗಿ ವಾಹನ ಮಾಲೀಕರು ಟೋಲ್ ಶುಲ್ಕ ನೀಡಬೇಕಾಗುತ್ತದೆ.
ನ್ಯಾಷನಲ್ ಪರ್ಮಿಟ್ ಹೊಂದಿರುವ ವಾಹನಗಳನ್ನು ನೂತನ ಅಧಿಸೂಚನೆಯಿಂದ ಹೊರಗಿಡಲಾಗಿದೆ. ರಾಷ್ಟ್ರೀಯ ಹೆದ್ದಾರಿ, ಸೇತುವೆ, ಬೈಪಾಸ್ ಅಥವಾ ಟನಲ್ ಮಾರ್ಗವನ್ನು ಬಳಸುವ ಖಾಸಗಿ ವಾಹನಗಳಿಗೆ, GNSS ಆಧಾರಿತ ಬಳಕೆದಾರ ಶುಲ್ಕ ಸಂಗ್ರಹ ವ್ಯವಸ್ಥೆಯಡಿಯಲ್ಲಿ ಒಂದು ದಿನದಲ್ಲಿ ಪ್ರತಿ ದಿಕ್ಕಿನಲ್ಲಿ 20 ಕಿಲೋಮೀಟರ್ ವರೆಗೆ ಯಾವುದೇ ಟೋಲ್ ನೀಡದೇ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಜುಲೈನಲ್ಲಿ ರಸ್ತೆ ಸಚಿವಾಲಯವು GNSS ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಆಯ್ದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಫಾಸ್ಟ್‌ಟ್ಯಾಗ್ ಜೊತೆಗೆ ಹೆಚ್ಚುವರಿ ಸೌಲಭ್ಯವಾಗಿ ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಿತ್ತು.
ಕರ್ನಾಟಕದ NH-275 ರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮತ್ತು ಹರಿಯಾಣದ NH-709 ರ ಪಾಣಿಪತ್-ಹಿಸಾರ್ ಎಕ್ಸ್‌ಪ್ರೆಸ್ ವೇನಲ್ಲಿ GNSS ಆಧಾರಿತ ಬಳಕೆದಾರರ ಶುಲ್ಕ ಸಂಗ್ರಹ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಾಯೋಗಿಕ ಅಧ್ಯಯನವನ್ನು ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.