ಗಾಝಾದಲ್ಲಿ ಮಾನವೀಯ ವಿರಾಮಕ್ಕೆ ಜಿ7 ಮುಖಂಡರ ಕರೆ

Update: 2023-11-08 15:19 GMT

Photo- PTI

ಟೋಕಿಯೊ: ಜಿ7 ದೇಶಗಳ ವಿದೇಶಾಂಗ ಸಚಿವರು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಚರ್ಚಿಸಲು ಬುಧವಾರ ಜಪಾನ್‍ನ ಟೋಕಿಯೊದಲ್ಲಿ ಸಭೆ ಸೇರಿದ್ದು ಮಾನವೀಯ ವಿರಾಮ ಮತ್ತು ಕಾರಿಡಾರ್ ವಿಚಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ ಕದನ ವಿರಾಮಕ್ಕೆ ನೇರವಾಗಿ ಆಗ್ರಹಿಸಿಲ್ಲ ಎಂದು ವರದಿಯಾಗಿದೆ. 

ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಗಾಝಾದಲ್ಲಿ ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ತುರ್ತು ಕ್ರಮದ ಅಗತ್ಯವನ್ನು ನಾವು ಒತ್ತಿಹೇಳುತ್ತೇವೆ. ತುರ್ತಾಗಿ ಅಗತ್ಯವಿರುವ ನೆರವು, ನಾಗರಿಕರ ಚಲನೆ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಅನುಕೂಲವಾಗುವಂತೆ ಮಾನವೀಯ ವಿರಾಮ ಮತ್ತು ಕಾರಿಡಾರ್ ಅನ್ನು ನಾವು ಬೆಂಬಲಿಸುತ್ತೇವೆ. ಇಸ್ರೇಲ್‍ಗೆ ತನ್ನನ್ನು ಮತ್ತು ತನ್ನ ಜನರನ್ನು ರಕ್ಷಿಸಿಕೊಳ್ಳುವ ಹಕ್ಕಿದೆ, ಆದರೆ ಇದು ಅಂತರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿರಬೇಕು. ಅಕ್ಟೋಬರ್ 7ರ ದಾಳಿ ಮರುಕಳಿಸುವುದನ್ನು ತಡೆಯಬೇಕಿದೆ ಎಂದು ಸಭೆಯ ಬಳಿಕ ನೀಡಲಾದ ಜಂಟಿ ಹೇಳಿಕೆ ತಿಳಿಸಿದೆ.

ಹಮಾಸ್‍ಗೆ ಬೆಂಬಲ ನೀಡುವುದನ್ನು ತಡೆಯುವಂತೆ, ಲೆಬನಾನ್‍ನ ಹಿಜ್ಬುಲ್ಲಾ ಮತ್ತಿತರ ಸಂಘಟನೆಗಳಿಗೆ ಬೆಂಬಲ ನೀಡುವ ಮೂಲಕ ಮಧ್ಯಪ್ರಾಚ್ಯವನ್ನು ಅಸ್ಥಿರಗೊಳಿಸುವ ಕೃತ್ಯದಿಂದ ದೂರ ಸರಿಯುವಂತೆ ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ತನ್ನ ಪ್ರಭಾವವನ್ನು ಬಳಸುವಂತೆ  ಇರಾನ್ ಅನ್ನು ಆಗ್ರಹಿಸಲಾಗಿದೆ.

ಉಕ್ರೇನ್‍ಗೆ ಬೆಂಬಲ ಪುನರುಚ್ಚರಿಸಿರುವ ಜಿ7 ದೇಶಗಳು `ಉಕ್ರೇನ್‍ನ ಸ್ವಾತಂತ್ರ್ಯ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗಾಗಿ ಹೋರಾಟವನ್ನು ಬೆಂಬಲಿಸುವ ನಮ್ಮ ದೃಢವಾದ ಬದ್ಧತೆಯು ಎಂದಿಗೂ ಅಸ್ಥಿರವಾಗುವುದಿಲ್ಲ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ಸಹಾಯ ಮಾಡದಂತೆ ಚೀನಾವನ್ನು ಆಗ್ರಹಿಸುತ್ತೇವೆ ಮತ್ತು ಉಕ್ರೇನ್‍ನಲ್ಲಿ ಶಾಶ್ವತ ಶಾಂತಿಯನ್ನು ಬೆಂಬಲಿಸುತ್ತೇವೆ' ಎಂದು ಹೇಳಿಕೆ ನೀಡಿವೆ.ಗಾಝಾ ಪರಿಸ್ಥಿತಿಯ ಬಗ್ಗೆ, ಮಾನವೀಯ ವಿರಾಮ ಮತ್ತು ಭವಿಷ್ಯದ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಇದೇ ಮೊದಲ ಬಾರಿ ಜಿ7 ಗುಂಪು ಲಿಖಿತವಾಗಿ ಸರ್ವಾನುಮತದ ಹೇಳಿಕೆ ಬಿಡುಗಡೆಗೊಳಿಸಿದೆ. ಇದೊಂದು ಮಹತ್ವದ ಸಾಧನೆಯಾಗಿದೆ ಎಂದು ಜಿ7 ಗುಂಪಿನ ಹಾಲಿ ಅಧ್ಯಕ್ಷ ಜಪಾನ್‍ನ ವಿದೇಶಾಂಗ ಸಚಿವ ಯೊಕೊ ಕಮಿಕವ ಶ್ಲಾಘಿಸಿದ್ದಾರೆ.

ಕದನ ವಿರಾಮಕ್ಕೆ ಖತರ್ ಮಧ್ಯಸ್ಥಿಕೆ

ದೋಹ: ಗಾಝಾದಲ್ಲಿ ಹಮಾಸ್ ವಶದಲ್ಲಿರುವ 15 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಕದನ ವಿರಾಮ ಜಾರಿಗೊಳಿಸುವ ಒಪ್ಪಂದಕ್ಕೆ  ಇಸ್ರೇಲ್ ಮತ್ತು ಹಮಾಸ್ ನಡುವೆ ಖತರ್ ಮಧ್ಯಸ್ಥಿಕೆ ವಹಿಸುತ್ತಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಬುಧವಾರ ವರದಿ ಮಾಡಿದೆ.

ಒಂದರಿಂದ ಎರಡು ದಿನಗಳ ಕದನ ವಿರಾಮಕ್ಕೆ ಬದಲಾಗಿ 10ರಿಂದ 15 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಅಮೆರಿಕ ಜತೆಗಿನ ಸಮನ್ವಯದಲ್ಲಿ ಖತರ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿದೆ. ಹಮಾಸ್‍ನ ವಶದಲ್ಲಿರುವವರನ್ನು ಬಿಡುಗಡೆ ಮಾಡಲು ಖತರ್ ತೀವ್ರ ರಾಜತಾಂತ್ರಿಕ ಪ್ರಯತ್ನ ಮುಂದುವರಿಸಿದೆ.   

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News