ಐನ್‍ಸ್ಟೈನ್,ಮಂಡೇಲಾರಂತಹ ಖ್ಯಾತನಾಮರಿಗೆ ಗಾಂಧೀಜಿ ಪ್ರೇರಣೆಯಾಗಿದ್ದರು : ರಾಹುಲ್ ಗಾಂಧಿ

Update: 2024-05-30 16:00 GMT

ರಾಹುಲ್ ಗಾಂಧಿ | PTI

ಭುವನೇಶ್ವರ : ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ನೆಲ್ಸನ್ ಮಂಡೇಲಾ ಮತ್ತು ಆಲ್ಬರ್ಟ್ ಐನ್ಸ್ಟೀನ್ ಅವರಂತಹ ಖ್ಯಾತನಾಮರು ಮಹಾತ್ಮಾ ಗಾಂಧೀಜಿಯವರಿಂದ ಪ್ರೇರಣೆಯನ್ನು ಪಡೆದಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಹೇಳಿದರು.

ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಸಂದರ್ಭ ರಾಹುಲ್,‘ಗಾಂಧಿ’ಚಲನಚಿತ್ರ ಬಂದ ನಂತರವಷ್ಟೇ ಜಗತ್ತಿಗೆ ಮಹಾತ್ಮಾ ಗಾಂಧೀಜಿಯವರ ಬಗ್ಗೆ ಗೊತ್ತಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತಿರುಗೇಟು ನೀಡಿದರು.

ಆರೆಸ್ಸೆಸ್ ಜೊತೆ ಗುರುತಿಸಿಕೊಂಡವರಲ್ಲಿ ಗಾಂಧಿ ಪರಂಪರೆಯ ಬಗ್ಗೆ ತಿಳುವಳಿಕೆಯಿಲ್ಲ ಎಂದು ಟೀಕಿಸಿದ ಅವರು, ಆರೆಸ್ಸೆಸ್ ನ ಶಾಖೆಗಳಲ್ಲಿ ತರಬೇತಿ ಪಡೆದವರು ಗೋಡ್ಸೆಯ ಅನುಯಾಯಿಗಳಾಗುತ್ತಾರೆ. ಅವರಿಗೆ ಗಾಂಧೀಜಿಯವರ ಬಗ್ಗೆ ಏನೂ ಗೊತ್ತಿರುವುದಿಲ್ಲ. ಅವರಿಗೆ ಹಿಂದುಸ್ಥಾನದ ಇತಿಹಾಸ, ಸತ್ಯ ಮತ್ತು ಅಹಿಂಸೆಯ ಬಗ್ಗೆ ತಿಳಿದಿರುವುದಿಲ್ಲ. ಹೀಗಿರುವಾಗ ಜಗತ್ತಿಗೆ ಗಾಂಧೀಜಿ ಬಗ್ಗೆ ಏನೂ ಗೊತ್ತಿರಲಿಲ್ಲ ಎಂಬ ಪ್ರಧಾನಿ ಹೇಳಿಕೆ ನಿರೀಕ್ಷಿತವಾಗಿತ್ತು ಎಂದು ಹೇಳಿದರು.

ವಿಶ್ವದಲ್ಲಿ ಅನೇಕರು ಗಾಂಧೀಜಿಯವರಿಂದ ಪ್ರೇರಣೆಯನ್ನು ಪಡೆದಿದ್ದಾರೆ. ವಿವಿಧ ಹೋರಾಟಗಳು, ಸ್ವಾತಂತ್ರ್ಯ ಆಂದೋಲನಗಳು, ಅಷ್ಟೇ ಏಕೆ, ಭಾರತದ ಮಕ್ಕಳೂ ಗಾಂಧೀಜಿಯವರಿಂದ ಪ್ರೇರಣೆ ಪಡೆದಿದ್ದಾರೆ ಎಂದರು.

ಈ ಬಗ್ಗೆ ಇನ್ನಷ್ಟು ಹೇಳುವ ಅಗತ್ಯವಿಲ್ಲ. ಏಕೆಂದರೆ ಅವರ ಶಾಖೆಯೇ ಅವರ ಜಗತ್ತಾಗಿದೆ ಎಂದು ರಾಹುಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News