ಮೂರನೇ ತ್ರೈಮಾಸಿಕದಲ್ಲಿ 8.4% ದರದಲ್ಲಿ ಜಿಡಿಪಿ ಪ್ರಗತಿ: ಒಂದೂವರೆ ವರ್ಷದಲ್ಲೇ ಅಧಿಕ

Update: 2024-03-01 04:52 GMT

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ದೇಶದ ಆರ್ಥಿಕತೆ ಕಳೆದ ಒಂದೂವರೆ ವರ್ಷದಲ್ಲೇ ಅತ್ಯಧಿಕ ಬೆಳವಣಿಗೆಯನ್ನು ಕಂಡಿದ್ದು, ಡಿಸೆಂಬರ್ ಅಂತ್ಯದ ವರೆಗಿನ ಅವಧಿಯಲ್ಲಿ ಶೇಕಡಾ 8.4ರಷ್ಟು ಪ್ರಗತಿ ದಾಖಲಿಸಿದೆ.

ಉತ್ಪಾದನೆ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಗಣನೀಯ ಪ್ರಗತಿ ಇದಕ್ಕೆ ಪ್ರಮುಖ ಕಾರಣ. ಸಾರ್ವತ್ರಿಕ ಚುನಾವಣೆ ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಜಾಗತಿಕ ಸವಾಲುಗಳ ನಡುವೆ ಆರ್ಥಿಕತೆಯನ್ನು ನಿಭಾಯಿಸುವ ಸರ್ಕಾರದ ಕ್ರಮಕ್ಕೆ ಇದರಿಂದ ಉತ್ತೇಜನ ಸಿಕ್ಕಿದಂತಾಗಿದೆ.

ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ (ಎನ್ ಎಸ್ ಓ) ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ದಾಖಲಾಗಿರುವ ಪ್ರಗತಿ ಹಿಂದಿನ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಶೇಕಡಾ 0.3ರಷ್ಟು ಅಧಿಕ. 2022-23ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ 4.3% ಪ್ರಗತಿ ಮಾತ್ರ ದಾಖಲಾಗಿತ್ತು. ಇದೀಗ ಎನ್ಎಸ್ಓ, 2023-24ರ ಒಟ್ಟಾರೆ ಪ್ರಗತಿ ಶೇಕಡ 7.6ರಷ್ಟು ಎಂದು ಅಂದಾಜಿಸಿದೆ. ಇದು ಹಿಂದಿನ ಅಂದಾಜು ಆಗಿದ್ದ 7.3%ಗೆ ಹೋಲಿಸಿದರೆ ಅಧಿಕ ಹಾಗೂ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ.

ಎನ್ ಎಸ್ ಓ ಎರಡನೇ ಹಾಗೂ ಮೂರನೇ ತ್ರೈಮಾಸಿಕ ಅವಧಿಯ ಅಂದಾಜನ್ನು ಕೂಡಾ ಪರಿಷ್ಕರಿಸಿದ್ದು, 2022-23ರ ಅವಧಿಯ ಪರಿಷ್ಕರಣೆ ಕೂಡ ಧನಾತ್ಮಕ ಪರಿಣಾಮಕ್ಕೆ ಕಾರಣವಾಗಿದೆ. 2023ನೇ ಹಣಕಾಸು ವರ್ಷದ ಜಿಡಿಪಿ ಪ್ರಗತಿಯನ್ನು ಶೇಕಡಾ 7ರ ಬದಲಾಗಿ 7.2%ಗೆ ಪರಿಷ್ಕರಿಸಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ ದಾಖಲಾಗಿರುವ ಪ್ರಗತಿ ಆರ್ ಬಿಐ ಅಂದಾಜಿಸಿದ ಶೇಕಡಾ 6.5ಕ್ಕಿಂತ ಅಧಿಕ. ಇತ್ತೀಚೆಗೆ ಕೇಂದ್ರ ಬ್ಯಾಂಕ್ ಭಾರತದ 2023-24ನೇ ವರ್ಷದ ಪ್ರಗತಿಯನ್ನು ಶೇಕಡಾ 6.5ರ ಬದಲು ಶೇಕಡಾ 7 ಎಂದು ಅಂದಾಜಿಸಿತ್ತು.

2023-24ರ ಮೂರನೇ ತ್ರೈಮಾಸಿಕದಲ್ಲಿ ದಾಖಲಾಗಿರುವ ಆಕರ್ಷಕ ಪ್ರಗತಿ ಭಾರತೀಯ ಆರ್ಥಿಕತೆಯ ಸದೃಢತೆ ಮತ್ತು ಸಂಭಾವ್ಯತೆಯನ್ನು ಬಲಪಡಿಸಿದೆ. 140 ಕೋಟಿ ಭಾರತೀಯರ ಜೀವನವನ್ನು ಸುಧಾರಿಸುವ ಮೂಲಕ ವಿಕಸಿತ ಭಾರತವನ್ನು ಸೃಷ್ಟಿಸುವುದು ನಮ್ಮ ಗುರಿ ಎಂದು ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News