ಉತ್ತರಪ್ರದೇಶ | ಭಾವಿ ಪತಿಯನ್ನು ಕೂಡಿ ಹಾಕಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಎಂಟು ಮಂದಿ ಆರೋಪಿಗಳ ಬಂಧನ
Update: 2025-04-14 12:17 IST

ಬಂಧಿತ ಆರೋಪಿಗಳು (Photo: ANI)
ಲಕ್ನೋ : ಉತ್ತರ ಪ್ರದೇಶ ಕಾಸ್‌ಗಂಜ್‌ನಲ್ಲಿ ವಿವಾಹ ನಿಶ್ಚಿತ ವರನನ್ನು ಕೂಡಿ ಹಾಕಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತ ಸಹಿತ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಪ್ರಿಲ್ 10ರಂದು ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಭಾವಿ ಪತಿಯ ಜೊತೆ ಯುವತಿ ಕಾಲುವೆಯೊಂದರ ಬಳಿ ಕುಳಿತಿದ್ದರು. ಇದನ್ನು ನೋಡಿದ ದುಷ್ಕರ್ಮಿಗಳ ಗುಂಪು ಯುವಕನನ್ನು ಕೂಡಿ ಹಾಕಿ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇದಲ್ಲದೆ ಜೋಡಿ ಬಳಿ ಇದ್ದ ಹಣವನ್ನು ಕೂಡ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅತ್ಯಾಚಾರ ಸಂತ್ರಸ್ತೆ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಕಾಸ್‌ಗಂಜ್ ಪೊಲೀಸರು ತಿಳಿಸಿದ್ದಾರೆ.