ಇನ್ನೊಂದು ದೇಶದ ನಾಗರಿಕನ ಹತ್ಯೆ ಸಂಚಿನಲ್ಲಿ ಸರ್ಕಾರದ ಶಾಮೀಲಾತಿ ಅಸ್ವೀಕಾರಾರ್ಹ ʼಕೆಂಪು ರೇಖೆʼ: ಅಮೆರಿಕಾ ರಾಯಭಾರಿ
ಹೊಸದಿಲ್ಲಿ: ಇನ್ನೊಂದು ದೇಶದ ನಾಗರಿಕನ ಹತ್ಯೆ ಯತ್ನದಲ್ಲಿ ವಿದೇಶಿ ಸರ್ಕಾರ ಅಥವಾ ಅದರ ಉದ್ಯೋಗಿಯ ಶಾಮೀಲಾತಿ ದಾಟಬಾರದ “ಕೆಂಪು ರೇಖೆ” ಆಗಿದೆ ಎಂದು ಭಾರತದಲ್ಲಿನ ಅಮೆರಿಕಾ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.
“ಯಾವುದೇ ದೇಶ, ತನ್ನ ಸರ್ಕಾರದ ಸಕ್ರಿಯ ಸದಸ್ಯನೊಬ್ಬ ಎರಡನೇ ದೇಶದಲ್ಲಿ ತನ್ನ ನಾಗರಿಕನನ್ನು ಹತ್ಯೆಗೈಯ್ಯುವ ಯತ್ನದಲ್ಲಿ ಶಾಮೀಲಾಗುವುದು, ನನ್ನ ಪ್ರಕಾರ ಯಾವುದೇ ದೇಶಕ್ಕೆ ಕೆಂಪು ರೇಖೆ ಆಗಿದೆ, ಅದು ಸಾರ್ವಭೌಮತೆಯ ವಿಚಾರ, ಹಕ್ಕುಗಳ ಮೂಲಭೂತ ವಿಚಾರ,” ಎಂದು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು. “ಅದು ಅಸ್ವೀಕಾರಾರ್ಹ ಕೆಂಪು ರೇಖೆ,” ಎಂದು ಅವರು ಹೇಳಿದರು.
ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಎಂಬಾತನನ್ನು ಹತ್ಯೆಗೈಯ್ಯುವ ಸಂಚಿನಲ್ಲಿ ಶಾಮೀಲಾದ ಆರೋಪದ ಮೇಲೆ ಭಾರತೀಯ ನಾಗರಿಕ ನಿಖಿಲ್ ಗುಪ್ತಾ ಎಂಬಾತನನ್ನು ಬಂಧಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಆತನನ್ನು ಈ ಸಂಚು ಕಾರ್ಯಗತಗೊಳಿಸಲು ಭಾರತ ಸರ್ಕಾರದ ಉದ್ಯೋಗಿ ನೇಮಿಸಿದ್ದರು ಎಂದು ಅಮೆರಿಕಾದ ಅಟಾರ್ನಿ ಕಚೇರಿ ಆರೋಪಿಸಿತ್ತು.