12 ಮಂದಿ ಸಾಧಕ ಕ್ರೀಡಾಪಟುಗಳಿಗೆ ಸರಕಾರಿ ಉದ್ಯೋಗ: ಅವಕಾಶ ಪತ್ರ ವಿತರಿಸಿದ ಸಿದ್ದರಾಮಯ್ಯ

Update: 2024-08-04 15:18 GMT

ಬೆಂಗಳೂರು: ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್‍ಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿವಿಧ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದ್ದಾರೆ.

ರವಿವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ 12 ಮಂದಿ ಕ್ರೀಡಾ ಪಟುಗಳಿಗೆ ಅವಕಾಶ ಪತ್ರ(ಆಫರ್ ಲೆಟರ್) ವಿತರಿಸಿ ಮಾತನಾಡಿದ ಅವರು, ಪದಕ ಪಡೆದವರಿಗೆ ರಾಜ್ಯ ಸರಕಾರ ನೆರವಾಗಲಿದೆ. ಕ್ರೀಡಾಪಟುಗಳಿಗೆ ಸರಕಾರಿ ಉದ್ಯೋಗ ನೀಡಲು ತೀರ್ಮಾನಿಸಿದ್ದೇವೆ ಎಂದರು.

ಸುಮಾರು 12 ಮಂದಿ ಕ್ರೀಡಾ ಪಟುಗಳಿಗೆ ನೇರ ನೇಮಕಾತಿಗೆ ಅವಕಾಶ ಪತ್ರ ನೀಡಲಾಗಿದೆ. 2016-17 ಒಲಿಂಪಿಕ್ಸ್ ಅಸೋಸಿಯೇಷನ್ ಏರ್ಪಾಡು ಮಾಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆ. ಆಗ ಸಾಧನೆ, ಪದಕ ಪಡೆದವರಿಗೆ ಸರಕಾರದಲ್ಲಿ ಆದ್ಯತೆ ಮೇಲೆ ಕೆಲಸ ನೀಡುವ ಬಗ್ಗೆ ಘೋಷಣೆ ಮಾಡಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಅನಂತರ ಬಂದ ಸರಕಾರ ಕ್ರೀಡಾಪಟುಗಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡುವ ಪ್ರಯತ್ನ ಮಾಡಲಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಶೇ.2ರಷ್ಟು ಮೀಸಲಾತಿ ಮಾತ್ರ ಬೊಮ್ಮಾಯಿ ಸರಕಾರ ಮಾಡಿತ್ತು. ನಾನು ಬಂದ ಮೇಲೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ.3ರಷ್ಟು ನೀಡಿದೆ. ಪದವಿ ಪಡೆದವರಿಗೆ ಗ್ರೂಪ್-ಸಿ ನೀಡಲು ತೀರ್ಮಾನ ಮಾಡಿದ್ದೇವೆ. 12 ಸಾಧಕರಲ್ಲಿ ಒಬ್ಬರಿಗೆ ಮಾತ್ರ ಗ್ರೂಪ್-ಎ, ಬಾಕಿ ಉಳಿದವರಿಗೆ ಗ್ರೂಪ್- ಬಿ ಹುದ್ದೆ ನೀಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಉದ್ಯೋಗ ಪತ್ರ ಪಡೆದ, ಪದಕ ವಿಜೇತರಿಗೆ ಅಭಿನಂದನೆಗಳು. 35-40 ವರ್ಷದ ವಯೋಮಿತಿಯನ್ನು ಮಾಡಿದ್ದೇವೆ. ಉದ್ಯೋಗಕ್ಕೆ ಸೇರಿಕೊಳ್ಳಲು 45 ವರ್ಷಗಳ ವಯೋಮಿತಿಯನ್ನು ನೀಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಯುವ ಸಬಲೀಕರಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಸೇರಿ ಹಲವರು ಉಪಸ್ಥಿತರಿದ್ದರು.

ಉದ್ಯೋಗ ಪಡೆದ ಕ್ರೀಡಾಪಟುಗಳು: ಗಿರೀಶ್ ಎಚ್.ಎನ್- ಕ್ಲಾಸ್ ಒನ್ ಆಫೀಸರ್ ಹುದ್ದೆ, ದಿವ್ಯಾ.ಟಿ.ಎಸ್- ಗ್ರೂಪ್ ಬಿ ಹುದ್ದೆ, ಉಷಾರಾಣಿ ಎನ್- ಗ್ರೂಪ್ ಬಿ ಹುದ್ದೆ, ಸುಷ್ಮಿತ ಪವಾರ್ ಓ- ಗ್ರೂಪ್ ಬಿ ಹುದ್ದೆ, ನಿಕ್ಕಿನ್ ತಿಮ್ಮಯ್ಯ ಸಿ.ಎ- ಗ್ರೂಪ್ ಬಿ, ಎಸ್.ವಿ.ಸುನೀಲ್-ಗ್ರೂಪ್ ಬಿ ಹುದ್ದೆ, ಕಿಶನ್ ಗಂಗೊಳ್ಳಿ- ಗ್ರೂಪ್ ಬಿ ಹುದ್ದೆ, ರಾಘವೇಂದ್ರ-ಗ್ರೂಪ್ ಬಿ ಹುದ್ದೆ, ರಾಧಾ ವಿ- ಗ್ರೂಪ್ ಬಿ ಹುದ್ದೆ, ಶರತ್ ಎಂ.ಎಸ್- ಗ್ರೂಪ್ ಬಿ ಹುದ್ದೆ, ಗುರುರಾಜ - ಗ್ರೂಪ್ ಬಿ ಹುದ್ದೆ, ಮಲಪ್ರಭಾ ಯಲ್ಲಪ್ಪ ಜಾಧವ- ಗ್ರೂಪ್ ಬಿ ಹುದ್ದೆ ಸೇರಿ ಒಟ್ಟು 12 ಕ್ರೀಡಾ ಸಾಧಕರಿಗೆ ಆಫರ್ ಲೆಟರ್ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News