"ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ": ಪತಂಜಲಿಯ ʼದಾರಿತಪ್ಪಿಸುವʼ ಜಾಹೀರಾತುಗಳ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ: ಪತಂಜಲಿ ಆಯುರ್ವೇದ ಸಂಸ್ಥೆಯ “ದಾರಿತಪ್ಪಿಸುವ ಹಾಗೂ ಸುಳ್ಳು” ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿ ಇಂದು ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ ಹಾಗೂ “ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ,” ಎಂದು ಹೇಳಿದೆ.
ತನ್ನ ಔಷಧಿಗಳ ಬಗ್ಗೆ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿ ನೀಡದಂತೆ ಯೋಗ ಗುರು ರಾಮದೇವ್ ಅವರ ಸಹಒಡೆತನ ಹೊಂದಿರುವ ಪತಂಜಲಿ ಸಂಸ್ಥೆಗೆ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು.
“ಈ ಗುರು ಸ್ವಾಮಿ ರಾಮದೇವ್ ಬಾಬಾ ಆವರಿಗೆ ಏನಾಯಿತು?... ಅವರು ಯೋಗವನ್ನು ಜನಪ್ರಿಯಗೊಳಿಸಿರುವುದರಿಂದ ನಾವು ಅವರನ್ನು ಗೌರವಿಸುತ್ತೇವೆ. ಆದರೆ ಅವರು ಇನ್ನೊಂದು ಪದ್ಧತಿಯನ್ನು ಟೀಕಿಸಬಾರದು. ಎಲ್ಲಾ ವೈದ್ಯರು ಹಂತಕರು ಅಥವಾ ಬೇರೇನೋ ಎಂಬಂತೆ ಅವರನ್ನು ದೂಷಿಸುವ ರೀತಿಯ ಜಾಹೀರಾತುಗಳನ್ನು ನೋಡುತ್ತೇವೆ. ದೊಡ್ಡ ಜಾಹೀರಾತುಗಳು,” ಎಂದು ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪೀಠ ಹೇಳಿತ್ತು.
ದಾರಿತಪ್ಪಿಸುವ ವೈದ್ಯಕೀಯ ಸಂಬಂಧಿ ಜಾಹೀರಾತುಗಳ ಕುರಿತಂತೆ ಪರಿಹಾರೋಪಾಯ ಕಂಡುಕೊಳ್ಳಬೇಕೆಂದೂ ಕೇಂದ್ರ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.