ದೂರಸಂಪರ್ಕ ಮಸೂದೆಯಿಂದ ಹೆಚ್ಚಳವಾಗಲಿದೆ ಅಂತರ್ಜಾಲದ ಮೇಲಿನ ಸರ್ಕಾರದ ನಿಯಂತ್ರಣ: ತಜ್ಞರ ಎಚ್ಚರಿಕೆ
ಹೊಸದಿಲ್ಲಿ: ಸೋಮವಾರ ಮಂಡನೆಯಾದ ದೂರಸಂಪರ್ಕ ಮಸೂದೆ, 2023 ಮಂಡನೆಯಾದ ಕೇವಲ ನಾಲ್ಕು ದಿನಗಳಲ್ಲಿ ಲೋಕಸಭೆಯಲ್ಲಿ ಗುರುವಾರ ಅನುಮೋದನೆ ಪಡೆದಿದೆ. ಭಾರತದಲ್ಲಿನ ದೂರಸಂಪರ್ಕ ಸೇವೆಗಳು ಹಾಗೂ ದೂರಸಂಪರ್ಕ ಜಾಲಗಳನ್ನು ನಿಯಂತ್ರಿಸುತ್ತಿದ್ದ ಭಾರತೀಯ ಟೆಲಿಗ್ರಾಫ್ ಕಾಯ್ದೆ 1855 ಹಾಗೂ ಭಾರತೀಯ ನಿಸ್ತಂತು ದೂರಸಂಪರ್ಕ ಕಾಯ್ದೆ 1933ರ ಬದಲಿಯಾಗಿ ಈ ಮಸೂದೆ ಅಂಗೀಕಾರವಾಗಿದೆ.
ಮುಂಬರಲಿರುವ ಈ ಕಾನೂನಿನ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಕಳವಳಗಳು ಮೂಡಿದ್ದು, ನಿರ್ದಿಷ್ಟವಾಗಿ ಅಂತರ್ಜಾಲ ಸ್ವಾತಂತ್ರ್ಯದ ಮೇಲೆ ಹೆಚ್ಚಳವಾಗಲಿರುವ ಕೇಂದ್ರ ಸರ್ಕಾರದ ಅಧಿಕಾರ ಮತ್ತು ವ್ಯಾಪ್ತಿಯ ಕುರಿತು ಹೆಚ್ಚು ಕಳವಳ ವ್ಯಕ್ತವಾಗುತ್ತಿದೆ.
ಡಿಜಿಟಲ್ - ಮಾಧ್ಯಮ ತಜ್ಞರ ಪ್ರಕಾರ, ಈ ಮಸೂದೆಯು ಯಾವುದೇ ಸುರಕ್ಷತೆಗಳಿಲ್ಲದೆ ದೂರಸಂಪರ್ಕ ಸೇವೆಗಳ ಮೇಲೆ ನಿಗಾ ವಹಿಸುವ ವಸಾಹತುಶಾಹಿ ಕಾಲಘಟ್ಟದ ಅಧಿಕಾರವನ್ನು ಮುಂದುವರಿಸಲಿದೆ. ಮತ್ತೊಂದೆಡೆ, ದೂರಸಂಪರ್ಕ ಉದ್ಯಮದ ಪ್ರತಿನಿಧಿಗಳು ಈ ಕಾನೂನಿನ ಕುರಿತು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಈ ಮಸೂದೆಯು ದೂರಸಂಪರ್ಕ ಸೇವೆಗಳ ಬಗ್ಗೆ ನಿಗೂಢ ವ್ಯಾಖ್ಯಾನಗಳನ್ನು ಒಳಗೊಂಡಿದೆ ಎಂದು ಡಿಜಿಟಲ್ ತಜ್ಞರು Scroll ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇದರ ಪರಿಣಾಮವಾಗಿ, ಈವರೆಗೆ ದೂರಸಂಪರ್ಕ ಸೇವೆಗಳು ಎಂದು ಸಾಂಪ್ರದಾಯಿಕವಾಗಿ ಪರಿಗಣಿತವಾಗಿರದಿದ್ದ ಇಮೇಲ್ ಹಾಗೂ ಸಂದೇಶ ವೇದಿಕೆಗಳ ಮೇಲಿನ ನಿಯಂತ್ರಣವನ್ನು ವಿಸ್ತರಿಸಲಿದೆ ಎನ್ನುತ್ತಾರೆ.
"ಸಂದೇಶ, ದೂರಸಂಪರ್ಕ ಹಾಗೂ ದೂರಸಂಪರ್ಕ ಸೇವೆಗಳು ಎಂಬ ವ್ಯಾಖ್ಯಾನದಡಿ ಇಮೇಲ್, ಕ್ಲೌಡ್ ಸೇವೆಗಳು, ಪ್ರಸರಣ ಹಾಗೂ ತಂತ್ರಾಂಶ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ" ಎನ್ನುತ್ತಾರೆ ಭಾರತದಲ್ಲಿನ ತಾಂತ್ರಿಕ ನೀತಿಗಳ ಕುರಿತು ವರದಿ ಮಾಡುವ ಮೀಡಿಯಾನಾಮ ಎಂಬ ಡಿಜಿಟಲ್ ಮಾಧ್ಯಮ ವೇದಿಕೆಯ ಸಂಸ್ಥಾಪಕ ನಿಖಿಲ್ ಪಹ್ವಾ.
ದೂರಸಂಪರ್ಕ ಸೇವೆಗಳ ಬಳಕೆದಾರರು ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗಬೇಕಿರುವುದರಿಂದ ಅದರ ಪರಿಣಾಮವು ನಿಗೂಢ ಲಿಪಿಯ ಸೇವೆಯನ್ನು ಒದಗಿಸುವ ಸಂದೇಶ ವೇದಿಕೆಗಳ ಮೇಲಾಗಲಿದೆ ಹಾಗೂ ಅದರಿಂದ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಎನ್ನುತ್ತಾರೆ ತಜ್ಞರು.
ಟೆಲಿಗ್ರಾಫ್ ಕಾಯ್ದೆಯಡಿ, ಯಾವುದೇ ಸುರಕ್ಷತಾ ವಿಧಾನಗಳಿಲ್ಲದೆ ದೂರಸಂಪರ್ಕ ಪ್ರತಿನಿಧಿಗಳು ನಿಗಾವಣೆ ಮಾಡಲು ಈ ಮಸೂದೆ ಅವಕಾಶ ನೀಡುತ್ತದೆ ಎಂಬುವುದರತ್ತಲೂ ತಜ್ಞರು ಬೊಟ್ಟು ಮಾಡುತ್ತಾರೆ.
ಅಂತರ್ಜಾಲ ಸೇವೆ ಸ್ಥಗಿತ ಸೇರಿದಂತೆ ಯಾವುದೇ ದೂರಸಂಪರ್ಕ ವಿಷಯಗಳ ಕುರಿತು ಸರ್ಕಾರದ ಅಧಿಕಾರಕ್ಕೆ ನಿಯಂತ್ರಣ ಹೇರಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿಲ್ಲ ಎಂಬುದರತ್ತಲೂ ತಜ್ಞರು ಗಮನ ಸೆಳೆಯುತ್ತಾರೆ. ಆದರೆ, ದೂರಸಂಪರ್ಕ ಉದ್ಯಮಗಳು ಈ ಮಸೂದೆಯನ್ನು ಪ್ರಶಂಸಿಸಿವೆ.