ಸರ್ಕಾರಿ ನೌಕರರಿಗೆ ಆರೆಸ್ಸೆಸ್ ಗೆ ಸೇರಲು ಅವಕಾಶ: ಆದೇಶ ಹಿಂಪಡೆಯುವಂತೆ ಕೇಂದ್ರಕ್ಕೆ ಮಾಜಿ ಅಧಿಕಾರಿಗಳಿಂದ ಪತ್ರ

Update: 2024-08-30 17:30 GMT

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಸದಸ್ಯರಾಗಲು 58 ವರ್ಷಗಳಷ್ಟು ಹಳೆಯದಾದ ನಿಷೇಧವನ್ನು ತೆಗೆದುಹಾಕುವ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಮಾಜಿ ಅಧಿಕಾರಿಗಳ ಗುಂಪೊಂದು (The constitutional conduct group) ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಆದೇಶದ ಜಾರಿಯು ಸಂವಿಧಾನದ ಆತ್ಮಕ್ಕೆ ಅಗಾಧ ಹಾನಿಯನ್ನುಂಟು ಮಾಡುತ್ತದೆ ಎಂದು ಮಾಜಿ ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.

ಭಾರತೀಯ ಸಮಾಜದಲ್ಲಿ ಜಾತಿ, ಧರ್ಮ ಮತ್ತು ಲಿಂಗವು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಹೇಳಿದೆ.

"ಜಾತ್ಯತೀತ ಪ್ರಜಾಪ್ರಭುತ್ವ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾದ ಸರ್ಕಾರಿ ನೌಕರರು, ಈ ಎರಡನ್ನೂ ಸೈದ್ಧಾಂತಿಕವಾಗಿ ವಿರೋಧಿಸುವ ಸಂಘಟನೆಗೆ ಬಹಿರಂಗವಾಗಿ ತಮ್ಮ ನಿಷ್ಠೆಯನ್ನು ಘೋಷಿಸಲು ಅನುಮತಿಸುವ ಈ ಸರ್ಕಾರದ ಆದೇಶದ ಬಗ್ಗೆ ತುಂಬಾ ಆತಂಕವಿದೆ" ಎಂದು ಮಾಜಿ ಅಧಿಕಾರಿಗಳ ಗುಂಪು ಹೇಳಿದೆ.

ಸಾರ್ವಜನಿಕ ಸೇವಕರು ಎಲ್ಲಾ ಸಮಯದಲ್ಲೂ ತಮ್ಮ ಮಾನವೀಯತೆ, ನಿಷ್ಪಕ್ಷಪಾತವಾದ ಸೇವೆ ಮತ್ತು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನಿಷೇಧವನ್ನು ತೆಗೆದುಹಾಕುವುದರಿಂದ "ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ಅಧಿಕಾರಿ, ಸರ್ಕಾರದ ಕಾರ್ಯದರ್ಶಿ, ಪ್ರಾಧ್ಯಾಪಕ, ಶಿಕ್ಷಕ ಅಥವಾ ಸರ್ಕಾರಿ ವೈದ್ಯರು" ಬಹಿರಂಗವಾಗಿ ಸಂವಿಧಾನದ ತಿರುಳನ್ನು ವಿರೋಧಿಸುವ ಸಂಘಟನೆಯ ಸದಸ್ಯರಾಗಬಹುದು ಎಂದು ಮಾಜಿ ಅಧಿಕಾರಿಗಳ ಗುಂಪು ಕಳವಳ ವ್ಯಕ್ತಪಡಿಸಿದೆ.

ನಿಷೇಧ ತೆಗೆದುಹಾಕುವ ಆದೇಶದಲ್ಲಿ ಸರ್ಕಾರವು, ಆರೆಸ್ಸೆಸನ್ನು ರಾಜಕೀಯ ಸಂಘಟಣೆಯಲ್ಲ ಸಾಂಸ್ಕೃತಿಕ ಸಂಘಟನೆ ಎಂದಿರುವುದಕ್ಕೆ, ಗುಂಪು ಆತಂಕ ವ್ಯಕ್ತಪಡಿಸಿದೆ.

"ಇದು ಸಂಪೂರ್ಣವಾಗಿ ನಿಜವಲ್ಲ. 99 ವರ್ಷಗಳ ಹಿಂದೆ ರಚನೆಯಾದಾಗಿನಿಂದ ಆರೆಸ್ಸೆಸ್ ಸಂಸ್ಥಾಪಕರು ಮತ್ತು ನಾಯಕರು ವ್ಯಕ್ತಪಡಿಸಿದಂತೆ ಹಿಂದೂ ರಾಷ್ಟ್ರದ ಗುರಿಯೇ ಆರೆಸ್ಸೆಸ್ ಸಿದ್ಧಾಂತದ ತಿರುಳಾಗಿದೆ." ಎಂದು ಮಾಜಿ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News