ರೈತರ ಜೊತೆಗಿನ 4ನೇ ಸುತ್ತಿನ ಮಾತುಕತೆಯಲ್ಲಿ 5 ವರ್ಷಗಳ ಕಾಲ ಕನಿಷ್ಠ ಬೆಂಬಲ ಬೆಲೆಗಳಲ್ಲಿ ಬೆಳೆ ಖರೀದಿಸುವ ಪ್ರಸ್ತಾವನೆ ಮುಂದಿಟ್ಟ ಕೇಂದ್ರ

Update: 2024-02-19 06:12 GMT

Photo: PTI

ಚಂಡೀಗಢ: ರೈತರು ಬೆಳೆದ ಧಾನ್ಯಗಳು, ಮೆಕ್ಕೆ ಜೋಳ ಮತ್ತು ಹತ್ತಿ ಬೆಳೆಗಳನ್ನು ಸರ್ಕಾರಿ ಏಜನ್ಸಿಗಳು ಕನಿಷ್ಠ ಬೆಂಬಲ ಬೆಲೆಗಳಲ್ಲಿ ರೈತರ ಜೊತೆ ಒಪ್ಪಂದಕ್ಕೆ ಬಂದ ನಂತರ ಐದು ವರ್ಷಗಳ ಕಾಲ ಖರೀದಿಸುವ ಪ್ರಸ್ತಾವನೆಯನ್ನು ರವಿವಾರ ರೈತ ಸಂಘಟನೆಗಳ ಜೊತೆಗಿನ ಸಭೆಯ ವೇಳೆ ಮೂವರು ಕೇಂದ್ರ ಸಚಿವರ ಸಮಿತಿ ಮುಂದಿಟ್ಟಿದೆ.

ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌, ಮೇಲಿನ ಒಪ್ಪಂದ ಪ್ರಸ್ತಾವನೆಯು ನವೀನ ಚಿಂತನೆ ಚರ್ಚೆಗಳ ವೇಳೆ ಬಂತು ಎಂದರು.

ಸೋಮವಾರ ಸಂಜೆಯೊಳಗಾಗಿ ರೈತ ನಾಯಕರು ಪ್ರಸ್ತಾವನೆಗಳ ಬಗ್ಗೆ ನಿರ್ಧರಿಸಲಿದ್ದಾರೆ ಎಂದೂ ಅವರು ಹೇಳಿದರು.

"ಪ್ರಸ್ತಾವನೆಯ ಭಾಗವಾಗಿ ಎನ್‌ಸಿಸಿಎಫ್‌ ಮತ್ತು ಎನ್‌ಎಎಫ್‌ಇಡಿ ನಂತಹ ಸಹಕಾರಿ ಸಂಘಗಳು ತೊಗರಿ ಬೇಳೆ, ಉದ್ದಿನ ಬೇಳೆ ಅಥವಾ ಮೆಕ್ಕೆ ಜೋಳ ಬೆಳೆಸುವ ರೈತರೊಂದಿಗೆ ಒಪ್ಪಂದಕ್ಕೆ ಬಂದು ಮುಂದಿನ ಐದು ವರ್ಷ ಅವಧಿಯಲ್ಲಿ ಅವರ ಬೆಳೆಗಳನ್ನು ಎಂಎಸ್‌ಪಿಯಲ್ಲಿ ಖರೀದಿಸಲಿವೆ. ಖರೀದಿಸುವ ಪ್ರಮಾಣಕ್ಕೆ ಯಾವುದೇ ಮಿತಿ ಇರುವುದಿಲ್ಲ, ಇದಕ್ಕಾಗಿ ಒಂದು ವೆಬ್‌ಸೈಟ್‌ ಅಭಿವೃದ್ಧಿಪಡಿಸಲಾಗುವುದು,” ಎಂದು ಅವರು ಹೇಳಿದರು.

ಪ್ರಸ್ತಾವನೆಯಂತೆ ಹತ್ತಿ ನಿಗಮವು ಹತ್ತಿಯನ್ನು ಐದು ವರ್ಷಗಳ ಒಪ್ಪಂದದಂತೆ ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ, ಹತ್ತಿಯ ಬೆಳೆಗಳನ್ನು ಮತ್ತೆ ಬೆಳೆಸಲು ಮುಂದೆ ಬರುವ ರೈತರಿಗೂ ಈ ಎಂಎಸ್‌ಪಿ ಒಪ್ಪಂದಾನುಸಾರ ದೊರೆಯಲಿದೆ ಎಂದು ಅವರು ಹೇಳಿದರು.

ರವಿವಾರ ಚಂಡೀಗಢದ ಮಹಾತ್ಮ ಗಾಂಧಿ ಸ್ಟೇಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ನಡೆದ ಸಭೆಯಲ್ಲಿ ಗೋಯೆಲ್‌ ಜೊತೆ ಕೃಷಿ ಸಚಿವ ಅರ್ಜುನ್‌ ಮುಂಡಾ ಹಾಗೂ ಕೃಷಿ ವ್ಯವಹಾರಗಳ ಸಚಿವ ನಿತ್ಯಾನಂದ್‌ ರೇ ಭಾಗವಹಿಸಿದ್ದರು. ಪಂಜಾಬ್‌ ಸಿಎಂ ಭಗವಂತ್‌ ಮನ್ನ್‌ ಕೂಡ ಸಭೆಯಲ್ಲಿ ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News