ಮುಸ್ಲಿಮರ ಮೇಲೆ ದಾಳಿಗಳಿಗೆ ಸರಕಾರಿ ಯಂತ್ರವು ಮೂಕಪ್ರೇಕ್ಷಕನಾಗಿದೆ: ರಾಹುಲ್ ಗಾಂಧಿ

Update: 2024-09-02 11:47 GMT

ರಾಹುಲ್ ಗಾಂಧಿ | PC : PTI

ಹೊಸದಿಲ್ಲಿ: ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ಮೇಲಿನ ದಾಳಿಗಳಿಗೆ ಸರಕಾರಿ ಯಂತ್ರವು ಮೂಕಪ್ರೇಕ್ಷಕನಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಆ.27ರಂದು ಗೋಮಾಂಸ ಸೇವನೆಯ ಶಂಕೆಯಲ್ಲಿ ಹರ್ಯಾಣದಲ್ಲಿ ಗೋರಕ್ಷಕರ ಗುಂಪಿನಿಂದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಥಳಿಸಿ ಹತ್ಯೆ ಮತ್ತು ಆ.28ರಂದು ಮಹಾರಾಷ್ಟ್ರದಲ್ಲಿ ರೈಲಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪದಲ್ಲಿ ಇನ್ನೋರ್ವ ವೃದ್ಧನ ಮೇಲಿನ ಹಲ್ಲೆಯ ಹಿನ್ನೆಲೆಯಲ್ಲಿ ರಾಹುಲ್ ಅವರ ಈ ಪ್ರತಿಕ್ರಿಯೆ ಹೊರಬಿದ್ದಿದೆ.

ಬಿಜೆಪಿ ಸರಕಾರದಡಿ ಇಂತಹ ದುಷ್ಕರ್ಮಿಗಳು ಉಚಿತ ಪಾಸ್ ಪಡೆದುಕೊಂಡಿರುತ್ತಾರೆ ಮತ್ತು ಇದೇ ಕಾರಣದಿಂದ ಇಂತಹ ಕೃತ್ಯಗಳನ್ನು ನಡೆಸಲು ಅವರು ಧೈರ್ಯ ಮಾಡುತ್ತಾರೆ ಎಂದು ರಾಹುಲ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಹರ್ಯಾಣದಲ್ಲಿ ಬಿಜೆಪಿ ಸರಕಾರವಿದ್ದರೆ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಶಿಂದೆ ಬಣ) ಮತ್ತು ಎನ್‌ಸಿಪಿ(ಅಜಿತ ಪವಾರ್ ಬಣ) ಮೈತ್ರಿಕೂಟದ ಆಡಳಿತವಿದೆ.

ಹರ್ಯಾಣ ಮತ್ತು ಮಹಾರಾಷ್ಟ್ರದಂತಹ ಹಿಂಸಾಚಾರದ ಘಟನೆಗಳು ಸಂವಿಧಾನದ ಮೇಲಿನ ದಾಳಿಗೆ ಸಮಾನವಾಗಿವೆ ಎಂದು ಹೇಳಿರುವ ರಾಹುಲ್,ದ್ವೇಷವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಅಧಿಕಾರದ ಏಣಿಯನ್ನು ಹತ್ತಿದವರು ನಿರಂತರವಾಗಿ ದೇಶಾದ್ಯಂತ ಭೀತಿಯ ಆಳ್ವಿಕೆಯನ್ನು ಸ್ಥಾಪಿಸುತ್ತಿದ್ದಾರೆ. ಗುಂಪುಗಳ ರೂಪದಲ್ಲಿ ಅಡಗಿರುವ ದ್ವೇಷಪೂರಿತ ಶಕ್ತಿಗಳು ಕಾನೂನಿನ ಆಡಳಿತಕ್ಕೆ ಬಹಿರಂಗವಾಗಿ ಸವಾಲು ಹಾಕುತ್ತಿವೆ ಮತ್ತು ಹಿಂಸಾಚಾರವನ್ನು ಹರಡುತ್ತಿವೆ. ಕಾನೂನಿನ ಪರಮಾಧಿಕಾರವನ್ನು ಪ್ರತಿಪಾದಿಸಲು ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News