ಕ್ಯಾನ್ಸರ್ ಔಷಧಿಗಳು, ಖಾರದ ತಿನಿಸುಗಳ ಮೇಲಿನ ಜಿಎಸ್‌ಟಿ ಕಡಿತ
ಹೊಸದಿಲ್ಲಿ : ಜೀವವಿಮೆ ಮತ್ತು ಆರೋಗ್ಯ ವಿಮೆಗಳ ಮೇಲಿನ ತೆರಿಗೆ ದರ ಇಳಿಕೆಯ ಪರಿಶೀಲನೆಗೆ ಸಚಿವರ ಸಮಿತಿಯೊಂದನ್ನು ರಚಿಸಲು ಹಾಗೂ ಕ್ಯಾನ್ಸರ್ ಔಷಧಿಗಳು ಮತ್ತು ನಮಕೀನ್ (ಖಾರದ ತಿನಿಸು)ಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸಲು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಮಂಡಳಿಯು ಸೋಮವಾರ ನಡೆದ ತನ್ನ 54ನೇ ಸಭೆಯಲ್ಲಿ ನಿರ್ಧರಿಸಿದೆ.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿಗಳನ್ನು ನೀಡಿದ ಸೀತಾರಾಮನ್, ಪ್ರಸ್ತುತ ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆ ಕುರಿತು ಸಮಿತಿಯ ಅಧ್ಯಕ್ಷರಾಗಿರುವ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ ಚೌಧರಿ ಅವರು ಪ್ರಸ್ತಾವಿತ ಸಚಿವರ ಸಮಿತಿಯ ನೇತೃತ್ವವನ್ನು ವಹಿಸಲಿದ್ದಾರೆ ಮತ್ತು ನೂತನ ಸದಸ್ಯರು ಸಮಿತಿಯನ್ನು ಸೇರಲಿದ್ದಾರೆ. ಸಮಿತಿಯು ಅಕ್ಟೋಬರ್ ಅಂತ್ಯದ ವೇಳೆಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ತಿಳಿಸಿದರು.
ವಿಮೆ ಕಂತುಗಳ ಮೇಲಿನ ತೆರಿಗೆ ಹೇರಿಕೆಯು ಸಂಸತ್ತಿನಲ್ಲಿ ಸದ್ದು ಮಾಡಿದ್ದು, ಆರೋಗ್ಯ ಮತ್ತು ಜೀವವಿಮೆ ಕಂತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಪ್ರತಿಪಕ್ಷ ಸದಸ್ಯರು ಆಗ್ರಹಿಸಿದ್ದರು. ಈ ವಿಷಯದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರೂ ಸೀತಾರಾಮನ್ ಅವರಿಗೆ ಪತ್ರವನ್ನು ಬರೆದಿದ್ದರು.
ಸೋಮವಾರದ ಸಭೆಯಲ್ಲಿ ಜಿಎಸ್‌ಟಿ ಮಂಡಳಿಯು ಕ್ಯಾನ್ಸರ್ ಔಷಧಿಗಳ ಮೇಲಿನ ತೆರಿಗೆ ದರವನ್ನು ಶೇ.12ರಿಂದ ಶೇ.5ಕ್ಕೆ ಮತ್ತು ನಮಕೀನ್‌ಗಳ ಮೇಲಿನ ತೆರಿಗೆ ದರವನ್ನು ಶೇ.18ರಿಂದ 12ಕ್ಕೆ ತಗ್ಗಿಸಲು ನಿರ್ಧರಿಸಿತು.
2026 ಮಾರ್ಚ್ ನಂತರ ಸ್ಥಗಿತಗೊಳ್ಳಲಿರುವ ಪರಿಹಾರ ಸೆಸ್‌ಗೆ ಸಂಬಂಧಿಸಿದ ವಿಷಯವನ್ನು ಪರಿಶೀಲಿಸಲು ಸಹ ಸಚಿವರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತೆರಿಗೆ ದರವನ್ನು ತರ್ಕಬದ್ಧಗೊಳಿಸುವಿಕೆ ಮತ್ತು ಆನ್‌ಲೈನ್ ಗೇಮಿಂಗ್ ಕುರಿತು ಸಚಿವ ಸಮಿತಿಯ ಸ್ಥಿತಿಗತಿ ವರದಿಯ ಕುರಿತೂ ಸಭೆಯು ಚರ್ಚಿಸಿತು.
ಪ್ರಸ್ತುತ ಋಣಾತ್ಮಕ ಬ್ಯಾಲೆನ್ಸ್ ಹೊಂದಿರುವ ಐಜಿಎಸ್‌ಟಿ(ಏಕೀಕೃತ ಸರಕುಗಳು ಮತ್ತು ಸೇವೆಗಳ ತೆರಿಗೆ) ಕುರಿತು ಹೆಚ್ಚುವರಿ ಕಾರ್ಯದರ್ಶಿ (ಕಂದಾಯ) ನೇತೃತ್ವದಲ್ಲಿ ಕಾರ್ಯದರ್ಶಿಗಳ ಸಮಿತಿಯೊಂದನ್ನು ರಚಿಸಲಾಗುವುದು ಎಂದೂ ಸೀತಾರಾಮನ್ ತಿಳಿಸಿದರು. ರಾಜ್ಯಗಳಿಂದ ಬಾಕಿಯಿರುವ ಐಜಿಎಸ್‌ಟಿ ಹಣವನ್ನು ವಸೂಲು ಮಾಡಲು ಮಾರ್ಗಗಳನ್ನು ಅದು ಪರಿಶೀಲಿಸಲಿದೆ ಎಂದರು.