ಗುಜರಾತ್ | ನ್ಯಾಯಾಲಯಗಳ ತೀರ್ಪನ್ನು ಉಲ್ಲಂಘಿಸಿ, ಮಸೀದಿ ಮತ್ತು ಹಲವಾರು ಮನೆಗಳ ನೆಲಸಮ

Update: 2024-10-06 15:24 GMT
PC : X/@AmitChavdaINC

ಹೊಸದಿಲ್ಲಿ : ಅಕ್ಟೋಬರ್ 1ರವರೆಗೆ ತನ್ನ ಅನುಮತಿ ಇಲ್ಲದೆ ದೇಶಾದ್ಯಂತ ಯಾವುದೇ ಕಟ್ಟಡಗಳನ್ನು ನೆಲಸಮಗೊಳಿಸಬಾರದು ಎಂದು ಸೆಪ್ಟೆಂಬರ್ 17ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರೆ, ಸೆಪ್ಟೆಂಬರ್ 28ರಂದು ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ಪ್ರದೇಶದಲ್ಲಿರುವ ಮುಸ್ಲಿಮರಿಗೆ ಸಂಬಂಧಿಸಿದ ಎಂಟು ಧಾರ್ಮಿಕ ಕಟ್ಟಡಗಳು ಹಾಗೂ ಬಹುತೇಕ ಮುಸ್ಲಿಮರ ಒಡೆತನದ 47 ಮನೆಗಳನ್ನು ಆರು ಗಂಟೆಯ ನೆಲಸಮ ಕಾರ್ಯಾಚರಣೆಯಲ್ಲಿ ಧ್ವಂಸಗೊಳಿಸಲಾಗಿದೆ. ಇದರಿಂದ ಸುಮಾರು 200 ಮಂದಿ ಸ್ಥಳೀಯರಿಗೆ ಸಮಸ್ಯೆಯಾಗಿದೆ. ನೆಲಸಮ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು 150 ಮಂದಿ ಸ್ಥಳೀಯರನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ತನ್ನದೆಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತ ಹಮೀದ್, ನನಗೆ ನೆನಪಿರುವಂತೆ ವೆರಾವಲ್ ನ ಪೀರ್ ಶಾ ಸಿಲಾರ್ ದರ್ಗಾ ದಲ್ಲಿ ನನ್ನ ತಂದೆ, ನನ್ನ ತಾತ, ನನ್ನ ಮುತ್ತಾತ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದರು. ವೆರಾವಲ್ ನಲ್ಲಿರುವ ಈ ದರ್ಗಾವು ಈ ಭಾಗದ ಮೀನುಗಾರರು ಹಾಗೂ ಕರಾವಳಿ ಭಾಗದ ನಿವಾಸಿಗಳಿಗೆ ಆಧ್ಯಾತ್ಮಿಕ ಕೇಂದ್ರವಾಗಿತ್ತು ಎನ್ನುತ್ತಾರೆ.

ಈ ನೆಲಸಮ ಕಾರ್ಯಾಚರಣೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾಧಿಕಾರಿ ಡಿ.ಡಿ.ಜಡೇಜಾ ಆದೇಶಿಸಿದ್ದಾರೆ.

ಸೋಮನಾಥ್ ಟ್ರಸ್ಟ್ ಹಾಗೂ ರಾಜ್ಯ ಸರಕಾರ ತಮ್ಮದೆಂದು ಪ್ರತಿಪಾದಿಸುತ್ತಿರುವ ನೂರು ಎಕರೆ ಜಮೀನಿನಲ್ಲಿ ಈ ನೆಲಸಮ ಕಾರ್ಯಾಚರಣೆ ನಡೆಯಿತು ಎಂದು ಸ್ಥಳೀಯರು ಹೇಳುತ್ತಾರೆ. ಸೋಮನಾಥ ಟ್ರಸ್ಟ್ ಧಾರ್ಮಿಕ ದತ್ತಿ ಸಂಸ್ಥೆಯಾಗಿದ್ದು, ಇದರ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಈ ಟ್ರಸ್ಟ್ ನ ಟ್ರಸ್ಟಿಗಳಾಗಿದ್ದಾರೆ.

*ಯಾವುದೇ ಮುನ್ಸೂಚನೆಯಿಲ್ಲ; ಯಾವುದೇ ಸಮಯಾವಕಾಶವಿಲ್ಲ

“ಅವರು ಬೆಳಗ್ಗೆ ಸುಮಾರು ಆರು ಗಂಟೆಗೆ ನೆಲಸಮ ಕಾರ್ಯಾಚರಣೆ ಪ್ರಾರಂಭಿಸಿದರು. ಮಕ್ಕಳು ನಿದ್ರಿಸುತ್ತಿದ್ದರು. ನಮಗೆ ಎಚ್ಚರಿಕೆಯನ್ನಾಗಲಿ ಅಥವಾ ನಮ್ಮ ವಸ್ತುಗಳನ್ನು ಪ್ಯಾಕ್ ಮಾಡಲಾಗಲಿ ಸಮಯಾವಕಾಶವನ್ನೇ ನೀಡಲಿಲ್ಲ. ನಾವು ಈವರೆಗೆ ಸಂಪಾದಿಸಿದ್ದೆಲ್ಲ ಇದೀಗ ಅವಶೇಷಗಳಾಗಿವೆ” ಎಂದು ಅಳಲು ತೋಡಿಕೊಳ್ಳುತ್ತಾರೆ ಹಮೀದ್.

“ಅವರು ಪ್ರೀತಿಪಾತ್ರ ಅಲ್ಲಾಹನ ಮಸೀದಿಯನ್ನು ನೆಲಸಮಗೊಳಿಸಿದರು. ಅಲ್ಲಾಹ್ ಎಲ್ಲವನ್ನೂ ನೋಡುತ್ತಿದ್ದರು” ಎಂದು ಹೇಳುವ ಹಮೀದ್, ಈ ನೆಲಸಮ ಕಾರ್ಯಾಚರಣೆಯಲ್ಲಿ ತಮ್ಮ ಮನೆಯನ್ನೂ ಕಳೆದುಕೊಂಡಿದ್ದಾರೆ.

ಇದರೊಂದಿಗೆ ಪ್ರಭಾಸ್ ಪಟನ್ ನಲ್ಲಿ ಹಾಜಿ ಮಂಗ್ರೋಲ್ ದರ್ಗಾ, ಶಾ ಸಿಲಾರ್ ದರ್ಗಾ, ಗರೀಬ್ ಶಾ ದರ್ಗಾ ಹಾಗೂ ಜಫರ್ ಮುಝಾಫ್ಫರ್ ದರ್ಗಾ ಸೇರಿದಂತೆ ಹಲವಾರು ಐತಿಹಾಸಿಕ ಮಸೀದಿಗಳನ್ನು ನೆಲಸಮಗೊಳಿಸಲಾಗಿದೆ. ಹಾಜಿ ಮಂಗ್ರೋಲ್ ಶಾ ದರ್ಗಾ ಈ ಹಿಂದಿನ ಜುನಾಗಢ ರಾಜ್ಯದ ಕಂದಾಯ ದಾಖಲೆಗಳಲ್ಲಿ 1924ರಿಂದಲೇ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಡೇಜಾ, “ನಿವಾಸಿಗಳು ತಮ್ಮ ವಾಸದ ದಾಖಲೆಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅತಿಕ್ರಮಣವನ್ನು ನೆಲಸಮಗೊಳಿಸಲಾಗಿದೆ” ಎಂದು ಹೇಳಿದ್ದಾರೆ.

ಮಸೀದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು ಎಂದು ತಮ್ಮ ನೆಲಸಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಜಡೇಜಾ, ಆದರೆ, ಯಾವುದೇ ಶಾಶ್ವತ ಕಟ್ಟಡಗಳನ್ನು ನೆಲಸಮಗೊಳಿಸಲಾಗಿಲ್ಲ. ಬದಲಿಗೆ ಕೇವಲ ತಾತ್ಕಾಲಿಕ ಗುಡಿಸಲುಗಳನ್ನು ಮಾತ್ರ ನೆಲಸಮಗೊಳಿಸಲಾಗಿದ್ದು, ಅವೆಲ್ಲ ಅತಿಕ್ರಮಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ತರಾತುರಿ ನೆಲಸಮ ಕಾರ್ಯಾಚರಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗುಜರಾತ್ ನ ಅಲ್ಪಸಂಖ್ಯಾತ ಸಮನ್ವಯ ಸಮಿತಿಯು, ಮುಸ್ಲಿಮರಿಗೆ ನ್ಯಾಯ ಒದಗಿಸಬೇಕು ಎಂದು ಸೆಪ್ಟೆಂಬರ್ 28ರಂದೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಪತ್ರ ಬರೆದಿತ್ತು. ಹಾಜಿ ಮಂಗ್ರೊಲಿಶಾ ದರ್ಗಾ, ಶಾ ಸಿಲಾರ್ ದರ್ಗಾ, ಗರೀಬ್ ಶಾ ದರ್ಗಾ ಹಾಗೂ ಜಾಫರ್ ಮುಝಾಫ್ಫರ್ ದರ್ಗಾಗಳು ಸೇರಿದಂತೆ ಪ್ರಭಾಸ್ ಪಟನ್ ನಲ್ಲಿರುವ ಹಲವಾರು ಪ್ರಾಚೀನ ಮಸೀದಿಗಳನ್ನು ನೆಲಸಮಗೊಳಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಹಾಜಿ ಮಂಗ್ರೋಲಿಶಾ ಶಾ ದರ್ಗಾ ಈ ಹಿಂದಿನ ಜುನಾಗಢ ರಾಜ್ಯದ 1924ರ ಕಂದಾಯ ದಾಖಲೆಯಲ್ಲಿಯೇ ಇದೆ ಎಂಬುದತ್ತ ಪತ್ರದಲ್ಲಿ ಬೊಟ್ಟು ಮಾಡಲಾಗಿತ್ತು.

ಗಿರ್ ಸೋಮನಾಥ್ ನಲ್ಲಿನ ಕಟ್ಟಡಗಳನ್ನು ಕಾನೂನುಬಾಹಿರವಾಗಿ ಮತ್ತು ಅಸಾಂವಿಧಾನಿಕವಾಗಿ ನೆಲಸಮಗೊಳಿಸಿರುವುದು ನ್ಯಾಯಾಂಗ ನಿಂದನೆ ಎಂದು ಕಳೆದ ವಾರ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗುಜರಾತ್ ಸರಕಾರದಿಂದ ಪ್ರತಿಕ್ರಿಯೆಯನ್ನು ಕೋರಿದೆ. ಪ್ರಭಾಸ್ ಪಟನ್ ನ ಪಟ್ನಿ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಸಮ್ಮಸ್ತ್ ಪಟ್ನಿ ಮುಸ್ಲಿಂ ಜಮಾತ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾ. ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ನಡೆಸುತ್ತಿದೆ.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News