ಗುಜರಾತ್| ಗ್ರಾಮದ ಸರ್‌ಪಂಚ್‌ನಿಂದ ಜಾತಿ ನಿಂದನೆ ಆರೋಪ: ದಲಿತ ಪ್ರಾಂಶುಪಾಲ ಆತ್ಮಹತ್ಯೆ

Update: 2023-10-22 14:46 GMT

ಸಾಂದರ್ಭಿಕ ಚಿತ್ರ (PTI)

ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ದಲಿತ ಪ್ರಾಂಶುಪಾಲರೊಬ್ಬರು ಶುಕ್ರವಾರ (ಅಕ್ಟೋಬರ್ 20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಸಾಯುವ ಮುನ್ನ ವಿಡಿಯೋ ಸಂದೇಶ ರೆಕಾರ್ಡ್‌ ಮಾಡಿದ್ದು, ತಮ್ಮ ಗ್ರಾಮದ ಸರಪಂಚ್ ತನ್ನ ಜಾತಿಯ ಆಧಾರದ ಮೇಲೆ ತನಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೃತರನ್ನು 52 ವರ್ಷದ ಕಾಂತಿ ಚೌಹಾಣ್ ಎಂದು ಗುರುತಿಸಲಾಗಿದೆ.

ಅವರು ಸಾಯುವ ಮೊದಲು ಅವರು ರೆಕಾರ್ಡ್ ಮಾಡಿದ ವೀಡಿಯೊ ಸಂದೇಶದಲ್ಲಿ, “ನಾನು ಕೆಳ ಜಾತಿಯಿಂದ ಬಂದಿದ್ದೇನೆ. ಆದರೆ ನಾನು ಕಲಿಸುವ ಕೆಲಸವನ್ನು ಮಾಡುತ್ತಿದ್ದೇನೆ. ದಯವಿಟ್ಟು ಅದನ್ನು ನನ್ನಿಂದ ಕಿತ್ತುಕೊಳ್ಳಬೇಡಿ. ನೀವು ನಮ್ಮ ಜಾತಿಯನ್ನು ಅಸ್ತ್ರವಾಗಿ ಬಳಸಿಕೊಂಡು ನಮ್ಮನ್ನು ಕೆಣಕಲು ಪ್ರಯತ್ನಿಸುತ್ತಿದ್ದೀರಿ. ಸರಪಂಚ್ ಆಗಿರುವ ನಿಮಗೆ ಇದು ನಾಚಿಕೆಗೇಡಿನ ಸಂಗತಿ” ಎಂದು ಚೌಹಾಣ್ ಅವರು ಹೇಳಿರುವುದಾಗಿ timesofIndia.com ವರದಿ ಮಾಡಿದೆ.

ಅವರು, (ಸರಪಂಚ್) ಬೆದರಿಕೆ ಹಾಕುತ್ತಿದ್ದಾರೆ. ನಾನು ಪಡೆದಿರುವ ಅನುದಾನವನ್ನು ನೀಡುವಂತೆ ಕೇಳುತ್ತಿದ್ದಾರೆ. ಅವರು ಹಳ್ಳಿಗರ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ನನ್ನ ಮತ್ತು ನನ್ನ ಜಾತಿಯ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಹಾಕಿದ್ದಾರೆ ಎಂದು ಪ್ರಾಂಶುಪಾಲರು ಆರೋಪಿಸಿರುವುದಾಗಿ TheNewIndianExpress ವರದಿ ಮಾಡಿದೆ.

ಆರೋಪಿ ಸರಪಂಚ್ ನನ್ನು ಮುಕೇಶ್ ಬೋರಿಸಾಗರ್ ಎಂದು ಗುರುತಿಸಲಾಗಿದೆ. ಗುಜರಾತ್ ಸರ್ಕಾರವು ಗ್ರಾಮದಲ್ಲಿ ಇತರ ಉದ್ದೇಶಗಳಿಗಾಗಿ ವಿತರಿಸಿದ ಶಾಲಾ ಆಡಳಿತ ಸಮಿತಿ (SMC) ಹಣವನ್ನು ಬೇರೆಡೆಗೆ ಬಳಸಲು ಚೌಹಾಣ್ ಮೇಲೆ ಒತ್ತಡ ಹೇರಿದ್ದರು ಎಂದು TOI ವರದಿ ಮಾಡಿದೆ.

ಶಾಲಾ ಸಮಯಕ್ಕಿಂತ ಮೊದಲು ಎರಡು ಗಂಟೆಗಳ ಅವಧಿಯ ಹೆಚ್ಚುವರಿ ತರಗತಿಗಳನ್ನು ನಡೆಸುವ ಚೌಹಾಣ್ ಅವರ ನಿರ್ಧಾರವು ಕೆಲವು ಪೋಷಕರ ಅಸಮಾಧಾನಕ್ಕೆ ಗುರಿಯಾಗಿತ್ತು ಎಂದು ಚೌಹಾಣ್ ಅವರ ಪತ್ನಿ ಸಲ್ಲಿಸಿದ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ ಎಂದು TOI ವರದಿ ಮಾಡಿದೆ.

ಚೌಹಾಣ್‌ ರ ಹಳ್ಳಿಯ ದಲಿತ ಸಮುದಾಯದ ಸದಸ್ಯರು ಶನಿವಾರ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಅವರ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದರು ಎಂದು ವರದಿಯಾಗಿದೆ.

"ನಾವು ಐಪಿಸಿಯ ಸೆಕ್ಷನ್ 306 [ಆತ್ಮಹತ್ಯೆಗೆ ಪ್ರಚೋದನೆ] ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಆರೋಪಿಯನ್ನು ಬಂಧಿಸಲು 90 ಪೊಲೀಸರನ್ನು ನಿಯೋಜಿಸಲಾಗಿತ್ತು " ಎಂದು ಅಮ್ರೇಲಿಯ ಉಪ ಪೊಲೀಸ್ ಅಧೀಕ್ಷಕ ಜೆ.ಪಿ.ಭಂಡಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News