ಫೆಲೆಸ್ತೀನ್ ಕುರಿತ ಕಾರ್ಯಕ್ರಮ ರದ್ದುಗೊಳಿಸಿದ ಗುರುಗ್ರಾಮ್ ವಿಶ್ವವಿದ್ಯಾನಿಲಯ
ಹೊಸದಿಲ್ಲಿ: ಫೆಲೆಸ್ತೀನ್ ಸಂಘರ್ಷದ ಕುರಿತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಝೋಯಾ ಹಸನ್ ಅವರು ಮಾಡಬೇಕಿದ್ದ ಭಾಷಣವನ್ನು ಗುರುಗ್ರಾಮ್ ವಿಶ್ವವಿದ್ಯಾಲಯವು ಇತ್ತೀಚೆಗೆ ರದ್ದುಗೊಳಿಸಿದೆ ಎಂದು ʼದಿ ವೈರ್ʼ ಬುಧವಾರ ವರದಿ ಮಾಡಿದೆ.
"ಸಮಾನ ಹಕ್ಕುಗಳಿಗಾಗಿ ಫೆಲೆಸ್ತೀನಿಯನ್ ಹೋರಾಟ: ಭಾರತ ಮತ್ತು ಜಾಗತಿಕ ಪ್ರತಿಕ್ರಿಯೆ" ಎಂಬ ಶೀರ್ಷಿಕೆಯಡಿಯಲ್ಲಿ, ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗವು ಈ ಭಾಷಣವನ್ನು ನವೆಂಬರ್ 12 ರಂದು ನಡೆಸಲು ನಿರ್ಧರಿಸಿತ್ತು. ಆದರೆ, ನವೆಂಬರ್ 10 ರಂದು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಸಂಘಟಕರು ಝೋಯಾ ಹಸನ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಈ ಬಗ್ಗೆ ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼನೊಂದಿಗೆ ಮಾತನಾಡಿದ ವಿಶ್ವವಿದ್ಯಾನಿಲಯದ ಉಪಕುಲಪತಿ ದಿನೇಶ್ ಕುಮಾರ್, ಈ ಕಾರ್ಯಕ್ರಮಕ್ಕೆ ತಮ್ಮ ಅನುಮೋದನೆಯನ್ನು ಕೋರಲಾಗಿಲ್ಲ ಎಂದು ಹೇಳಿದ್ದಾರೆ.
"ವಿಶ್ವವಿದ್ಯಾನಿಲಯದ ಶಿಕ್ಷಕರೊಬ್ಬರು ಚರ್ಚೆಯನ್ನು ಏರ್ಪಡಿಸಿದ್ದರು, ನಾನು ಕ್ಯಾಂಪಸ್‌ನಲ್ಲಿ ಇರಲಿಲ್ಲವಾದ್ದರಿಂದ ಇದು ನನಗೆ ತಿಳಿದಿರಲಿಲ್ಲ. ಏರ್ಪಡಿಸಿದ್ದ ವಿಷಯವು ವಿವಾದಾಸ್ಪದವಾಗಿರುವುದರಿಂದ ನಾವು ಅದನ್ನು ರದ್ದುಗೊಳಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಫೆಲೆಸ್ತೀನ್ ಸಂಘರ್ಷದ ಕುರಿತು ತಾನು ಬರೆದ ಅಭಿಪ್ರಾಯ ಪತ್ರಿಕೆಯಲ್ಲಿ ಪ್ರಕಟವಾದ ನಂತರ ವಿವಿಯ ರಾಜ್ಯಶಾಸ್ತ್ರ ವಿಭಾಗವು ತನ್ನನ್ನು ಸಂಪರ್ಕಿಸಿದೆ ಎಂದು ಝೋಯಾ ಹೇಳಿದ್ದಾರೆ.
"ಫೆಲೆಸ್ತೀನ್ ಸಂಘರ್ಷಕ್ಕೆ ಭಾರತದ ಪ್ರತಿಕ್ರಿಯೆಯ ಕುರಿತು ಸರ್ಕಾರ ಮತ್ತು ಸರ್ಕಾರೇತರ ಮಟ್ಟದಲ್ಲಿ ಈ ಚರ್ಚೆಯನ್ನು ನಡೆಸುವುದು ಬಹಳ ಮುಖ್ಯ ಎಂದು ಅವರು ನನಗೆ ಹೇಳಿದರು. ನಾನು ತಕ್ಷಣ ಒಪ್ಪಿಕೊಂಡೆ. ಉಪನ್ಯಾಸದ ಶೀರ್ಷಿಕೆಯ ಬಗ್ಗೆ ವಿಚಾರಿಸಲು ನವೆಂಬರ್ 5 ರಂದು ಸಂಘಟಕರು ನನಗೆ ಮತ್ತೆ ಕರೆ ಮಾಡಿ, ನವೆಂಬರ್ 12 ರಂದು ನಿಗದಿಯಾಗಿದ್ದ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಿದ್ದರು." ಎಂದು ಝೋಯಾ ದಿ ಇಂಡಿಯನ್ ಎಕ್ಸ್‌ಪ್ರೆಸ್ ಗೆ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಅನುಮೋದನೆ ಪಡೆಯಲಾಗಿದೆ ಎಂದು ಆಯೋಜಕರು ಹೇಳಿದ್ದರು. ಆದರೆ, ನವೆಂಬರ್ 10 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕರೆ ಮಾಡಿ ಕಾರ್ಯಕ್ರಮ ರದ್ದಾಗಿರುವುದರ ಬಗ್ಗೆ ತಿಳಿಸಿರುವುದಾಗಿ ಝೋಯಾ ಹೇಳಿದ್ದಾರೆ.