2015ರಿಂದ ಭಾರತೀಯ ಐಟಿ ಸಂಸ್ಥೆಗಳಿಗೆ ಎಚ್-1ಬಿ ವೀಸಾ ಮಂಜೂರಾತಿ ಅರ್ಧದಷ್ಟು ಇಳಿಕೆ : ವರದಿ

Update: 2024-12-13 15:04 GMT

ಸಾಂದರ್ಭಿಕ ಚಿತ್ರ | PC : thewire.in

ಹೊಸದಿಲ್ಲಿ : ಅಮೆರಿಕದಲ್ಲಿ 2015ರಿಂದ ಭಾರತೀಯ ಐಟಿ ಸಂಸ್ಥೆಗಳಿಗೆ ಎಚ್-1ಬಿ ವೀಸಾ ಮಂಜೂರಾತಿಗಳು ಅರ್ಧದಷ್ಟು ಕಡಿಮೆಯಾಗಿವೆ ಎನ್ನುವುದನ್ನು ನೂತನ ಅಧ್ಯಯನವೊಂದು ಬೆಳಕಿಗೆ ತಂದಿದೆ. ಅಮೆರಿಕದ ಚಿಂತನ ಚಾವಡಿ ನ್ಯಾಷನಲ್ ಫೌಂಡೇಷನ್ ಫಾರ್ ಅಮೆರಿಕನ್ ಪಾಲಿಸಿ (ಎನ್‌ಎಫ್‌ಎಪಿ)ಯಿಂದ ಸರಕಾರದ ದತ್ತಾಂಶಗಳ ವಿಶ್ಲೇಷಣೆಯ ಪ್ರಕಾರ 2024ರ ವಿತ್ತವರ್ಷದಲ್ಲಿ ಭಾರತದ ಏಳು ಪ್ರಮುಖ ಐಟಿ ಸಂಸ್ಥೆಗಳು ಹೊಸ ಉದ್ಯೋಗಗಳಿಗಾಗಿ ಕೇವಲ 7,299 ಎಚ್-1ಬಿ ವೀಸಾ ಮಂಜೂರಾತಿಗಳನ್ನು ಸ್ವೀಕರಿಸಿವೆ,ವಿತ್ತವರ್ಷ 2015ರಲ್ಲಿ ಅವು 14,792 ಎಚ್-1ಬಿ ವೀಸಾ ಮಂಜೂರಾತಿಗಳನ್ನು ಪಡೆದುಕೊಂಡಿದ್ದವು.

ಎಚ್-1ಬಿ ವೀಸಾ ಲಾಟರಿ ವ್ಯವಸ್ಥೆ ಮೂಲಕ ಹಂಚಿಕೆ ಮಾಡಲಾಗುವ ತಾತ್ಕಾಲಿಕ ವಲಸೆಯೇತರ ವೀಸಾ ಆಗಿದ್ದು,ಅಮೆರಿಕದಲ್ಲಿ ಹೆಚ್ಚು ಪರಿಣತಿ ನಿರೀಕ್ಷಿಸುವ ಉದ್ಯೋಗಗಳಲ್ಲಿ ಕೆಲಸ ಮಾಡಲು ಪದವೀಧರರಿಗೆ ಮತ್ತು ನುರಿತ ಕೆಲಸಗಾರರಿಗೆ ಅವಕಾಶವನ್ನು ಒದಗಿಸುತ್ತದೆ.

ವಿತ್ತವರ್ಷ 2024ರಲ್ಲಿ ಮಂಜೂರಾತಿಯನ್ನು ಪಡೆದುಕೊಂಡ ಸುಮಾರು ಅರ್ಧದಷ್ಟು(ಶೇ.49.1) ಎಚ್-1ಬಿ ವೀಸಾ ಅರ್ಜಿಗಳು ವೃತ್ತಿಪರ,ವೈಜ್ಞಾನಿಕ ಮತ್ತು ತಾಂತ್ರಿಕ ಸೇವೆಗಳಿಗೆ ಸಂಬಂಧಿಸಿದ್ದು, ಶೈಕ್ಷಣಿಕ ಸೇವೆಗಳು(ಶೇ.11.9), ತಯಾರಿಕೆ (ಶೇ.9.3) ಹಾಗೂ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ನೆರವು(ಶೇ.6.5) ಕ್ಷೇತ್ರಗಳು ನಂತರದ ಸ್ಥಾನಗಳಲ್ಲಿವೆ.

ಎಚ್-1ಬಿ ವೀಸಾಗಳ ಅತಿ ದೊಡ್ಡ ಪ್ರಾಯೋಜಕ ಸಂಸ್ಥೆಯಾಗಿರುವ ಅಮೆಝಾನ್ ವಿತ್ತ ವರ್ಷ 2024ರಲ್ಲಿ 3,871 ವೀಸಾಗಳನ್ನು ಪಡೆದಿದ್ದು, ಇದು ಹಿಂದಿನ ವರ್ಷದ 4,052ಕ್ಕಿಂತ ಕಡಿಮೆಯಾಗಿದೆ. ಕಾಗ್ನಿಝಂಟ್ (2,837), ಇನ್ಫೋಸಿಸ್(2,504), ಟಿಸಿಎಸ್(1,452) ಮತ್ತು ಇತರ ಪ್ರಮುಖ ಭಾರತೀಯ ಐಟಿ ಸಂಸ್ಥೆಗಳಿಗೆ ಮಂಜೂರಾಗಿರುವ ಎಚ್-1ಬಿ ವೀಸಾಗಳ ಸಂಖ್ಯೆಯಲ್ಲಿಯೂ ಗಮನಾರ್ಹ ಇಳಿಕೆಯಾಗಿದೆ ಎಂದು ಅಧ್ಯಯನ ವರದಿಯು ತಿಳಿಸಿದೆ.

ಹಲವಾರು ವಿಶ್ಲೇಷಕರು ಮಂಜೂರಾತಿಗಳ ಕುಸಿತಕ್ಕೂ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಉದ್ಯೋಗಿಗಳ ಅಗತ್ಯಗಳಲ್ಲಿನ ಬದಲಾವಣೆಗೂ ತಳುಕು ಹಾಕಿದ್ದಾರೆ.

‘ನನ್ನ ಅಭಿಪ್ರಾಯದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಕೃತಕ ಬುದ್ಧಿಮತ್ತೆ (ಎಐ) ಎಲ್ಲ ಪ್ರಮುಖ ಐಟಿ ಸಂಸ್ಥೆಗಳ ವ್ಯವಹಾರ ಮಾದರಿಗಳ ಮೇಲೆ ಪರಿಣಾಮ ಬೀರುತ್ತಿವೆ. ಅವುಗಳಿಗೆ ಅನಗತ್ಯ ಹುದ್ದೆಗಳು ಅಥವಾ ಆರ್ಥಿಕ ಹಿಂಜರಿತದಿಂದಾಗಿ ವ್ಯವಹಾರವನ್ನು ಕಳೆದುಕೊಳ್ಳುತ್ತಿರುವ ವಿಭಾಗಗಳಲ್ಲಿ ನೇಮಕಗಳ ಅಗತ್ಯವಿಲ್ಲ’ ಎಂದು ಅಭಿನವ್ ಇಮಿಗ್ರೇಷನ್ ಸರ್ವಿಸಸ್‌ನ ಸ್ಥಾಪಕ ಅಜಯ ಶರ್ಮಾ ಹೇಳಿದರು.

ಎನ್‌ಎಫ್‌ಎಪಿ ವರದಿಯಂತೆ, ಟ್ರಂಪ್ ಆಡಳಿತದಲ್ಲಿ ಎಚ್-1ಬಿ ವೀಸಾಗಳ ನಿರಾಕರಣೆ ಇನ್ನಷ್ಟು ಹೆಚ್ಚಬಹುದು. ಹಿಂದಿನ ಟ್ರಂಪ್ ಸರಕಾರದ ಅವಧಿಯಲ್ಲಿ ಎಚ್-1ಬಿ ಮತ್ತು ಎಲ್-1 ವೀಸಾಗಳ ಮೇಲೆ ನಿರ್ಬಂಧಕ ನೀತಿಗಳನ್ನು ಹೇರಲಾಗಿತ್ತು ಮತ್ತು ಮುಂದೆಯೂ ಇಂತಹುದೇ ಕ್ರಮವು ಈ ವೀಸಾಗಳನ್ನು ಹೆಚ್ಚಾಗಿ ಅವಲಂಬಿಸಿರುವ ಐಟಿ ಸೇವಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಬಹುದು.

ಇನ್ನೊಂದೆಡೆ ಎಲಾನ್ ಮಸ್ಕ್ ಒಡೆತನದ ಇಲೆಕ್ಟ್ರಿಕ್ ವಾಹನ ಕಂಪನಿ ಟೆಸ್ಲಾಕ್ಕೆ ಎಚ್-1 ಬಿ ವೀಸಾಗಳ ಮಂಜೂರಾತಿಯು ಏರಿಕೆಯನ್ನು ಕಂಡಿದೆ. ವಿತ್ತವರ್ಷ 2023ರಲ್ಲಿ ಅದು 328 ಎಚ್-1ಬಿ ವೀಸಾಗಳನ್ನು ಪಡೆದುಕೊಂಡಿದ್ದರೆ ವಿತ್ತವರ್ಷ 2024ರಲ್ಲಿ ಈ ಸಂಖ್ಯೆ 742ಕ್ಕೇರಿದೆ. ಆ ಮೂಲಕ ಅದು ಅಗ್ರ 25 ಉದ್ಯೋಗದಾತರ ಪೈಕಿ 16ನೇ ಸ್ಥಾನಕ್ಕೆ ಏರಿದೆ.

ಪ್ರಸ್ತುತ ಅಮೆರಿಕವು 65,000 ಎಚ್-1ಬಿ ವೀಸಾಗಳ ವಾರ್ಷಿಕ ಮಿತಿಯನ್ನು ಹೊಂದಿದ್ದು, ಅಮೆರಿಕದ ವಿವಿಗಳಿಂದ ಸ್ನಾತಕೋತ್ತರ ಪದವಿ ಅಥವಾ ಉನ್ನತ ಶೈಕ್ಷಣಿಕ ಅರ್ಹತೆಯನ್ನು ಪಡೆದಿರುವ ವಿದೇಶಿ ಪ್ರಜೆಗಳಿಗಾಗಿ ಹೆಚ್ಚುವರಿ 20,000 ಎಚ್-1ಬಿ ವೀಸಾಗಳನ್ನು ಕಾದಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News