ರಾಜಸ್ಥಾನ | ಪೊಲೀಸರ ವಿರುದ್ಧ ದೌರ್ಜನ್ಯ ಆರೋಪಿಸಿ ಯುವಕ ಆತ್ಮಹತ್ಯೆ: ಕುಟುಂಬಸ್ಥರಿಂದ ಪ್ರತಿಭಟನೆ
ಜೈಪುರ: ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಸ್ಥಳೀಯ ರಾಜಕಾರಣಿಯೋರ್ವನ ವಿರುದ್ಧ ದೌರ್ಜನ್ಯ ಆರೋಪಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಧರಣಿ ಕುಳಿತಿದ್ದಾರೆ.
ಶುಭಂ ಸಕ್ಸೇನಾ(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶುಭಂ ಕುಟುಂಬಸ್ಥರು ಶವಾಗಾರದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ ಮತ್ತು ಮೃತದೇಹದ ಅಂತಿಮ ವಿಧಿ ವಿಧಾನಕ್ಕೆ ನಿರಾಕರಿಸಿದ್ದಾರೆ.
ಈ ಕುರಿತು ಬರಾನ್ ಸಿಟಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಮ್ವಿಲಾಸ್ ಮೀನಾ ಮಾಹಿತಿ ನೀಡಿದ್ದು, ಮಂಗಳವಾರ ಮಧ್ಯಾಹ್ನ ಶುಭಂ ಸಕ್ಸೇನಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬರಾನ್ ಜಿಲ್ಲೆಯ ನಗರಸಭೆ ಮಾಜಿ ಅಧ್ಯಕ್ಷ ಕಮಲ್ ರಾಥೋಡ್ ಹಾಗೂ ಪೊಲೀಸರು ತನ್ನ ಮೇಲೆ ಸುಳ್ಳು ಪ್ರಕರಣವನ್ನು ಹಾಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಯುವಕ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ಪ್ರಮೋದ್ ಜೈನ್ ಸಂತ್ರಸ್ತ ಕುಟುಂಬದ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬಿಜೆಪಿ ನಾಯಕರು ಈ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.