ಹರ್ಯಾಣ ವಿಧಾನಸಭಾ ಚುನಾವಣೆ | ಜುಲಾನ ವಿಧಾನಸಭಾ ಕ್ಷೇತ್ರದಿಂದ ವಿನೇಶ್ ಫೋಗಟ್ ವಿರುದ್ಧ ಕವಿತಾ ದಲಾಲ್ ರನ್ನು ಕಣಕ್ಕಿಳಿಸಿದ ಆಪ್
ಹೊಸದಿಲ್ಲಿ : ಬುಧವಾರ ಹರ್ಯಾಣ ವಿಧಾನಸಭಾ ಚುನಾವಣೆಗೆ ತನ್ನ 21 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರುವ ಆಮ್ ಆದ್ಮಿ ಪಕ್ಷ, ಜುಲಾನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಹಾಗೂ ಬಿಜೆಪಿಯ ಯೋಗೇಶ್ ಬೈರಾಗಿ ವಿರುದ್ಧ ಕವಿತಾ ದಲಾಲ್ ಅವರನ್ನು ಕಣಕ್ಕಿಳಿಸಿದೆ.
ಅಕ್ಟೋಬರ್ 5ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಪ್ರಕಟಿಸಿರುವ ನಾಲ್ಕನೆಯ ಪಟ್ಟಿ ಇದಾಗಿದೆ.
ಅಂಬಾಲ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ರಾಜ್ ಕೌರ್ ಗಿಲ್, ಕರ್ನಲ್ ನಿಂದ ಸುನೀಲ್ ಬಿಂದಾಲ್ ಹಾಗೂ ಗುರುಗ್ರಾಮ್ ನಿಂದ ನಿಶಾಂತ್ ಆನಂದ್ ಅವರನ್ನ ಆಮ್ ಆದ್ಮಿ ಪಕ್ಷ ಕಣಕ್ಕಿಳಿಸಿದೆ.
ಕಾಂಗ್ರೆಸ್ ಪಕ್ಷದೊಂದಿಗಿನ ಸೀಟು ಹಂಚಿಕೆ ಮಾತುಕತೆ ಮುರಿದು ಬಿದ್ದಿದ್ದರಿಂದ ಸೋಮವಾರ ಆಮ್ ಆದ್ಮಿ ಪಕ್ಷವು ಹರ್ಯಾಣ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.
ಇಲ್ಲಿಯವರೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು 61 ಅಭ್ಯರ್ಥಿಗಳನ್ನು ಹರ್ಯಾಣ ವಿಧಾನಸಭಾ ಚುನಾವಣೆಗೆ ಪ್ರಕಟಿಸಿದೆ.
ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನವಾಗಿದೆ. 90 ಮಂದಿ ಸದಸ್ಯ ಬಲದ ಹರ್ಯಾಣ ವಿಧಾನಸಭಾ ಚುನಾವಣೆಯು ಅಕ್ಟೋಬರ್ 5ರಂದು ನಡೆಯಲಿದೆ.
ಇದಕ್ಕೂ ಮುನ್ನ, ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಹರ್ಯಾಣ ಮತ್ತು ದಿಲ್ಲಿಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದರೆ, ಪಂಜಾಬ್ ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷಕ್ಕೆ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿತ್ತಾದರೂ, ಆ ಸ್ಥಾನದಲ್ಲಿ ಆಮ್ ಆದ್ಮಿ ಪಕ್ಷ ಪರಾಭವಗೊಂಡಿತ್ತು.
2019ರಲ್ಲಿ ನಡೆದಿದ್ದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 46 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ, ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸುವಲ್ಲಿ ವಿಫಲಗೊಂಡಿತ್ತು.