ಯೋಗ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ, ಆದರೆ ಪತಂಜಲಿ ಉತ್ಪನ್ನಗಳು ಬೇರೆ ವಿಚಾರ: ರಾಮದೇವ್ ಬಗ್ಗೆ ಸುಪ್ರೀಂ ಕೋರ್ಟ್
ಯೋಗ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ, ಆದರೆ ಪತಂಜಲಿ ಉತ್ಪನ್ನಗಳು ಬೇರೆ ವಿಚಾರ: ರಾಮದೇವ್ ಬಗ್ಗೆ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಪತಂಜಲಿ ಆಯುರ್ವೇದ ಸಂಸ್ಥೆಯ ದಾರಿತಪ್ಪಿಸುವ ಜಾಹೀರಾತುಗಳ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಕೇಸಿನಲ್ಲಿ ತನ್ನ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ಕಾಯ್ದಿರಿಸಿದೆ. ಪತಂಜಲಿ ಸಂಸ್ಥೆಯ ಪ್ರವರ್ತಕರಾದ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಖುದ್ದು ಹಾಜರಾತಿಯಿಂದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ವಿನಾಯಿತಿ ನೀಡಿದೆ.
ಇಂದು ವಿಚಾರಣೆ ವೇಳೆ ಬಾಬಾ ರಾಮದೇವ್ ಆವರಿಗೆ ತಮ್ಮ ಪ್ರಭಾವವನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ನ್ಯಾಯಪೀಠ ಸಲಹೆ ನೀಡಿದೆ.
“ಜನರು ಜಾಗೃತರಾಗಿದ್ದಾರೆ, ಅವರಿಗೆ ಆಯ್ಕೆಗಳಿದ್ದರೆ ಅವರು ಒಳ್ಳೆಯ ಆಯ್ಕೆಗಳನ್ನು ಮಾಡುತ್ತಾರೆ, ಬಾಬಾ ರಾಮದೇವ್ ಅವರು ಬಹಳಷ್ಟು ಪ್ರಭಾವ ಹೊಂದಿದ್ದಾರೆ. ಅದನ್ನು ಅವರು ಸರಿಯಾದ ರೀತಿಯಲ್ಲಿ ಬಳಸಲಿ,” ಎಂದು ನ್ಯಾಯಾಲಯ ಹೇಳಿತು.
ಬಾಬಾ ರಾಮದೇವ್ ಅವರು ಯೋಗ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ಧಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದಾಗ, ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೊಹ್ಲಿ, “ಯೋಗ ಕ್ಷೇತ್ರದಲ್ಲಿ ಮಾಡಿದ್ದು ಒಳ್ಳೆಯದು, ಆದರೆ ಪತಂಜಲಿ ಉತ್ಪನ್ನಗಳು ಬೇರೆ ವಿಚಾರ,” ಎಂದು ಹೇಳಿದರು.
ಪರವಾನಗಿ ರದ್ದುಗೊಂಡಿರುವಂತಹ ಪತಂಜಲಿ ಉತ್ಪನ್ನಗಳ ಕುರಿತಾದ ದಾರಿತಪ್ಪಿಸುವ ಜಾಹೀರಾತುಗಳನ್ನು ವಾಪಸ್ ಪಡೆಯಲು ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ವಿವರಿಸುವ ಅಫಿಡವಿಟ್ ಸಲ್ಲಿಸಲು ಪತಂಜಲಿ ಸಂಸ್ಥೆಗೆ ನ್ಯಾಯಾಲಯ ಇಂದು ಮೂರು ವಾರಗಳ ಕಾಲಾವಕಾಶ ನೀಡಿದೆ.