ಗಾಝಿಯಾಬಾದ್ | ಬಕ್ರೀದ್ ಆಚರಿಸಲು ಮನೆಗೆ ಮರಳುತ್ತಿದ್ದ ನಾಲ್ವರು ಇಟ್ಟಿಗೆ ಕಾರ್ಖಾನೆ ಕಾರ್ಮಿಕರು ಅಪಘಾತದಲ್ಲಿ ಮೃತ್ಯು
ಗಾಝಿಯಾಬಾದ್: ಕ್ಯಾಂಟರ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ, ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಇಟ್ಟಿಗೆ ಭಟ್ಟಿ ಕಾರ್ಮಿಕರು ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಹೊರವರ್ತುಲ ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದೆ ಎಂದು ಗಾಝಿಯಾಬಾದ್ ಪೊಲೀಸರು ತಿಳಿಸಿದ್ದಾರೆ.
ಮಧ್ಯಮ ಗಾತ್ರದ ಟ್ರಕ್ ಆದ ಕ್ಯಾಂಟರ್, ಹರ್ಯಾಣದ ಸೋನಿಪತ್‌ನಿಂದ ಉತ್ತರ ಪ್ರದೇಶದ ಶಹಜಹಾನ್‌ಪುರ್ ಹಾಗೂ ಹರ್ದೋಯಿಗೆ 37 ಮಂದಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಅವರೆಲ್ಲ ಬಕ್ರೀದ್ ಆಚರಿಸಲು ತಮ್ಮ ಮನೆಗಳಿಗೆ ಮರಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೃತರನ್ನು ಮಾಯಾದೇವಿ (40), ನಂಜುಮನ್ (60), ಅವರ ಪುತ್ರ ಇರ್ಷಾದ್ (20) ಹಾಗೂ ಶಬೀನಾ (21) ಎಂದು ಗುರುತಿಸಲಾಗಿದ್ದು, ಇವರೆಲ್ಲ ಉತ್ತರ ಪ್ರದೇಶದ ಕಮ್ರುವಾ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ.
ಈ ಘಟನೆಯು ಮುಂಜಾನೆ ಸುಮಾರು 1.15ರ ವೇಳೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಂಟರ್ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಕೆಲವು ವ್ಯಕ್ತಿಗಳು ಮೂತ್ರ ವಿಸರ್ಜನೆಗೆಂದು ವಾಹನದಿಂದ ಕೆಳಗಿಳಿದಿದ್ದಾರೆ. ಈ ಸಂದರ್ಭದಲ್ಲಿ ಭಾಗ್ಪಟ್‌ನಿಂದ ಬರುತ್ತಿದ್ದ ಟ್ರಕ್, ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ವಾಹನವು ಮಗುಚಿಕೊಂಡಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.