ಮುಂಬೈನಲ್ಲಿ ಭಾರೀ ಮಳೆ | ಜನಜೀವನ ಅಸ್ತವ್ಯಸ್ತ; ಶಾಲಾ ಕಾಲೇಜುಗಳಿಗೆ ರಜೆ
ಮುಂಬೈ: ಭಾರೀ ಮಳೆಯಿಂದ ತತ್ತರಿಸಿರುವ ಮುಂಬೈನಲ್ಲಿ ಗುರುವಾರ ವಾಹನ ಮತ್ತು ರೈಲು ಸಂಚಾರ ಗುರುವಾರ ಪುನರಾರಂಭಗೊಂಡಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿದ್ದವು. ಲೋಕಲ್ ರೈಲುಗಳ ಸಂಚಾರ ನಿಲ್ಲಿಸಲಾಗಿತ್ತು. ಮುಂಬೈ ಗೆ ಆಗಮಿಸುತ್ತಿದ್ದ ಕನಿಷ್ಠ 14 ವಿಮಾನಗಳನ್ನು ಬೇರೆಡೆ ತಿರುಗಿಸಲಾಗಿತ್ತು.
ಭಾರತೀಯ ಹವಾಮಾನ ಇಲಾಖೆಯು ಮುಂಬೈ ಮತ್ತು ಅದರ ಪಕ್ಕದ ಜಿಲ್ಲೆಗಳಾದ ಥಾಣೆ, ಪಾಲ್ಘರ್ ಮತ್ತು ರಾಯಗಢಕ್ಕೆ ಗುರುವಾರ ಬೆಳಿಗ್ಗೆ ರೆಡ್ ಅಲರ್ಟ್ ಘೋಷಿಸಿದೆ.
ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗುರುವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಥಾಣೆ, ಪಾಲ್ಘರ್, ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.
ಮುಂಬೈ ನಾಗರಿಕ ಸಂಸ್ಥೆ ಮತ್ತು ಪೊಲೀಸರು ನಗರ ಮತ್ತು ಸುತ್ತಮುತ್ತಲಿನ ಎಲ್ಲಾ ಜನರಿಗೆ ಸಾಧ್ಯವಾದಷ್ಟು ಮನೆಯೊಳಗೆ ಇರಲು ಸಲಹೆ ನೀಡಿದ್ದಾರೆ.
"ಮುಂಬೈ ಜನತೆ ಅಗತ್ಯವಿಲ್ಲದಿದ್ದರೆ, ಮನೆಯಿಂದ ಹೊರಬರುವುದನ್ನು ತಪ್ಪಿಸಿ" ಎಂದು BMCಯು X ನಲ್ಲಿ ಪೋಸ್ಟ್ ಮಾಡಿದೆ.
ಬುಧವಾರ ಉಪನಗರ ಅಂಧೇರಿಯಲ್ಲಿ ಭಾರೀ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದ ನಾಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರದ ಸಂಜೆ 5 ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ಕೆಲವು ರಸ್ತೆಗಳು ನೀರು ತುಂಬಿ, ನದಿಗಳಂತಾದವು. ಕೆಲ ಪ್ರದೇಶಗಳಲ್ಲಿ 100 ಮಿಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು ತಿಳಿದು ಬಂದಿದೆ.
ಲೋಕಲ್ ರೈಲು ಸಂಚಾರ ದಟ್ಟನೆ ಹೆಚ್ಚಿರುವ ಕುರ್ಲಾ ಮತ್ತು ಥಾಣೆ ನಿಲ್ದಾಣಗಳ ನಡುವೆ ರೈಲುಗಳು ನಿಂತಿದ್ದರಿಂದ, ಸಾವಿರಾರು ಪ್ರಯಾಣಿಕರು ಸಿಎಸ್‌ಎಂಟಿ ಮತ್ತು ಇತರ ನಿಲ್ದಾಣಗಳಲ್ಲಿ ಸಿಲುಕಿಕೊಂಡರು. ಪರಿಣಾಮವಾಗಿ ವಿವಿಧೆಡೆ ಟ್ರಾಫಿಕ್ ಜಾಮ್‌ಗಳು ಉಂಟಾದವು.
ಬಿಎಂಸಿ ಅಂಕಿಅಂಶಗಳ ಪ್ರಕಾರ ಸಂಜೆ 5 ರಿಂದ ರಾತ್ರಿ 10 ಗಂಟೆಯ ನಡುವೆ ದ್ವೀಪ ನಗರ, ಪೂರ್ವ ಉಪನಗರಗಳು ಮತ್ತು ಪಶ್ಚಿಮ ಉಪನಗರಗಳಲ್ಲಿ 87.79 ಮಿಮೀ, 167.48 ಮಿಮೀ, ಮತ್ತು 95.57 ಮಿಮೀ ಮಳೆ ಮಳೆಯಾಗಿದೆ.