‘‘ಹಮಾರೆ ಬಾರಾ’’ ಬಿಡುಗಡೆಗೆ ಹೈಕೋರ್ಟ್ ಒಪ್ಪಿಗೆ

Update: 2024-06-19 15:03 GMT

ಹಮಾರೇ ಬಾರಾ ಚಿತ್ರ

ಮುಂಬೈ: ‘‘ಹಮಾರೇ ಬಾರಾ’’ ಚಿತ್ರದ ಆಕ್ಷೇಪಾರ್ಹ ಅಂಶಗಳನ್ನು ತೆಗೆದುಹಾಕಲು ನಿರ್ಮಾಪಕರು ಒಪ್ಪಿದ ಬಳಿಕ, ಚಿತ್ರದ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಬುಧವಾರ ಅನುಮೋದನೆ ನೀಡಿದೆ. ಚಿತ್ರವು ಮೊದಲು ಜೂನ್ 7ರಂದು ಹಾಗೂ ಬಳಿಕ ಜೂನ್ 14ರಂದು ಬಿಡುಗಡೆಗೊಳ್ಳಬೇಕಾಗಿತ್ತು. ಇನ್ನು ಅದು ಜೂನ್ 21ರಂದು ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಚಿತ್ರವು ಮುಸ್ಲಿಮ್ ಸಮುದಾಯವನ್ನು ಅವಹೇಳನ ಮಾಡುತ್ತದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅದು ವಿವಾದಕ್ಕೆ ಸಿಲುಕಿತ್ತು. ಚಿತ್ರವು ಕುರ್‌ಆನ್‌ಅನ್ನು ತಿರುಚುತ್ತದೆ ಹಾಗೂ ಇಸ್ಲಾಮ್ ಧರ್ಮ ಮತ್ತು ಮುಸ್ಲಿಮ್ ಸಮುದಾಯಕ್ಕೆ ಅವಮಾನ ಮಾಡುತ್ತದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಚಿತ್ರದ ಬಿಡುಗಡೆಗೆ ನಿಷೇಧ ಹೇರಬೇಕು ಎಂಬುದಾಗಿ ಅರ್ಜಿದಾರರು ಕೋರಿದ್ದರು.

ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರನ್ನೊಳಗೊಂಡ ವಿಭಾಗ ಪೀಠವೊಂದು ಚಿತ್ರವನ್ನು ವೀಕ್ಷಿಸಿ, ಚಿತ್ರದಲ್ಲಿ ಮಾಡಬೇಕಾದ ಬದಲಾವಣೆಗಳನ್ನು ಸೂಚಿಸಿತು. ಅದಕ್ಕೆ ಚಿತ್ರದ ನಿರ್ಮಾಪಕರು ಮತ್ತು ಅರ್ಜಿದಾರರು ಒಪ್ಪಿಗೆ ನೀಡಿದರು.

ಸೂಚಿಸಲಾಗಿರುವ ಅಗತ್ಯ ಬದಲಾವಣೆಗಳನ್ನು ಮಾಡಿದ ಬಳಿಕ ಚಿತ್ರವನ್ನು ಬಿಡುಗಡೆಗೊಳಿಸುವಂತೆ ಬಳಿಕ ನ್ಯಾಯಾಲಯ ಹೇಳಿತು.

ಅಗತ್ಯ ಬದಲಾವಣೆಗಳನ್ನು ಮಾಡಿ ಕೇಂದ್ರೀಯ ಚಿತ್ರ ಪ್ರಮಾಣಪತ್ರ ಮಂಡಳಿ (ಸಿಬಿಎಫ್‌ಸಿ)ಯಿಂದ ಪ್ರಮಾಣಪತ್ರವನ್ನು ಪಡೆಯಲಾಗುವುದು ಎಂದು ಬಳಿಕ ಚಿತ್ರ ನಿರ್ಮಾಪಕರು ಹೇಳಿದರು.

ಅದೇ ವೇಳೆ, ಸಿಬಿಎಫ್‌ಸಿಯಿಂದ ಪ್ರಮಾಣಪತ್ರ ಪಡೆಯದೆ ಟ್ರೇಲರ್ ಬಿಡುಗಡೆ ಮಾಡಿರುವುದಕ್ಕೆ ಚಿತ್ರದ ನಿರ್ಮಾಪಕರಿಗೆ 5 ಲಕ್ಷ ರೂ. ದಂಡ ವಿಧಿಸಿತು.

ಈ ತಿಂಗಳ ಆದಿ ಭಾಗದಲ್ಲಿ, ಚಿತ್ರದ ಬಿಡುಗಡೆಯನ್ನು ಹೈಕೋರ್ಟ್ ಮುಂದೂಡಿತ್ತು. ಆದರೆ, ಸಿಬಿಎಫ್‌ಸಿ ಸೂಚಿಸಿರುವಂತೆ ಆಕ್ಷೇಪಾರ್ಹ ಭಾಗಗಳನ್ನು ತೆಗೆದು ಹಾಕಲಾಗುವುದು ಎಂಬುದಾಗಿ ನಿರ್ಮಾಪಕರು ಹೇಳಿದ ಬಳಿಕ, ಚಿತ್ರದ ಬಿಡುಗಡೆಗೆ ಹೈಕೋರ್ಟ್ ಅನುಮತಿ ನೀಡಿತ್ತು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಸುಪ್ರೀಂ ಕೋರ್ಟ್ ಕಳೆದ ವಾರ ಚಿತ್ರದ ಬಿಡುಗಡೆಗೆ ತಡೆ ನೀಡಿತ್ತು ಮತ್ತು ಪ್ರಕರಣದ ವಿಚಾರಣೆ ನಡೆಸಿ ಸೂಕ್ತ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಹೈಕೋರ್ಟ್‌ಗೆ ನಿರ್ದೇಶಿಸಿತ್ತು.

ಮಂಗಳವಾರ, ತಾನು ಚಿತ್ರ ನೋಡಿದ್ದು, ಅದರಲ್ಲಿ ಕುರ್‌ಆನ್ ಮತ್ತು ಮುಸ್ಲಿಮ್ ಸಮುದಾಯಕ್ಕೆ ವಿರುದ್ಧವಾಗಿರುವುದು ಏನೂ ಇಲ್ಲ ಎಂದು ಹೈಕೋರ್ಟ್ ಹೇಳಿತು. ಅದೂ ಅಲ್ಲದೆ, ವಾಸ್ತವವಾಗಿ, ಚಿತ್ರವು ಮಹಿಳೆಯರ ಸಬಲೀಕರಣದ ಉದ್ದೇಶವನ್ನು ಹೊಂದಿದೆ ಎಂಬುದಾಗಿಯೂ ನ್ಯಾಯಾಲಯ ಹೇಳಿತು. ‘‘ಭಾರತೀಯರು ಮುಗ್ಧರು ಅಥವಾ ಮೂರ್ಖರಲ್ಲ’’ ಎಂಬುದಾಗಿಯೂ ಬಾಂಬೆ ಹೈಕೋರ್ಟ್ ಹೇಳಿತು.

ಬುಧವಾರ, ಚಿತ್ರದಲ್ಲಿರುವ ಕೆಲವು ಆಕ್ಷೇಪಾರ್ಹ ಭಾಗಗಳು ಮತ್ತು ಸಂಭಾಷಣೆಗಳನ್ನು ತೆಗೆಯುವ ಬಗ್ಗೆ ತಾವು ಒಮ್ಮತಕ್ಕೆ ಬಂದಿರುವುದಾಗಿ ಪ್ರಕರಣದ ಅರ್ಜಿದಾರರು ಮತ್ತು ಪ್ರತಿವಾದಿಗಳು ನ್ಯಾಯಾಲಯಕ್ಕೆ ತಿಳಿಸಿದರು.

ಡಿಸ್‌ಕ್ಲೇಮರ್ (ನಿರಾಕರಣೆ)ನ ಬರಹಗಳನ್ನು ಸರಿಯಾಗಿ ಓದಲು ವೀಕ್ಷಕರಿಗೆ ಸಾಧ್ಯವಾಗುವಂತೆ ಅದನ್ನು 12 ಸೆಕೆಂಡ್‌ಗಳ ಕಾಲ ಪ್ರದರ್ಶಿಸುವುದು ಮತ್ತು ಅರ್ಜಿದಾರರು ಕೋರಿರುವಂತೆ ಕುರ್‌ಆನ್‌ನ ಹೆಚ್ಚುವರಿ ವಚನವೊಂದನ್ನು ಚಿತ್ರಕ್ಕೆ ಸೇರಿಸಿಕೊಳ್ಳುವುದು, ಚಿತ್ರಕ್ಕೆ ಮಾಡಲಾಗಿರುವ ಬದಲಾವಣೆಗಳಲ್ಲಿ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News