ದಂಪತಿಗಳಲ್ಲಿ ಮೂಡದ ಒಮ್ಮತ: ಮಗುವಿಗೆ ನಾಮಕರಣ ಮಾಡಿದ ಹೈಕೋರ್ಟ್!
ಮೂರು ವರ್ಷದ ಮಗುವಿಗೆ ನಾಮಕರಣ ಮಾಡುವ ಕುರಿತು ಒಮ್ಮತ ಮೂಡದ ಕಾರಣ ಇತ್ತೀಚೆಗೆ ಕೇರಳ ಹೈಕೋರ್ಟ್ ಆ ಮಗುವಿಗೆ ನಾಮಕರಣ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಪೋಷಕರ ಕಲಹದಿಂದ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರು ನಮೂದಾಗಿರಲಿಲ್ಲ ಎ
ತಿರುವನಂತಪುರಂ: ಬೇರ್ಪಟ್ಟಿರುವ ದಂಪತಿಗಳಲ್ಲಿ ತಮ್ಮ ಮೂರು ವರ್ಷದ ಮಗುವಿಗೆ ನಾಮಕರಣ ಮಾಡುವ ಕುರಿತು ಒಮ್ಮತ ಮೂಡದ ಕಾರಣ ಇತ್ತೀಚೆಗೆ ಕೇರಳ ಹೈಕೋರ್ಟ್ ಆ ಮಗುವಿಗೆ ನಾಮಕರಣ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಪೋಷಕರ ಕಲಹದಿಂದ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರು ನಮೂದಾಗಿರಲಿಲ್ಲ ಎಂದು indiatoday.in ವರದಿ ಮಾಡಿದೆ.
ತನ್ನ ಮಗುವಿಗೆ ಹೆಸರಿಡಬೇಕು ಎಂದು ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ನ ಈ ನಿರ್ಣಯ ಹೊರ ಬಿದ್ದಿದೆ. ಆದರೆ, ಮಗುವಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ಪೋಷಕರಿಬ್ಬರೂ ಹಾಜರಿರಬೇಕು ಎಂದು ರಿಜಿಸ್ಟ್ರಾರ್ ಒತ್ತಾಯಿಸಿದ್ದರಿಂದ, ಮಗುವಿನ ತಾಯಿಯು ಪರಿಹಾರಕ್ಕಾಗಿ ಮತ್ತೆ ಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬೇಚು ಕುರಿಯನ್ ಥಾಮಸ್ ಅವರು, “ಮಗುವಿನ ಹೆಸರು ಕಾಣೆಯಾಗಿರುವುದು ಮಗುವಿನ ನಡತೆ ಹಾಗೂ ಬೆಳವಣಿಗೆಯ ಹಿತದೃಷ್ಟಿಯಿಂದ ಒಳಿತಲ್ಲ. ಮಗುವಿನ ಆರೈಕೆಯು, ಅದಕ್ಕೆ ಹೆಸರನ್ನಿಡಬೇಕು ಎಂದು ಆಗ್ರಹಿಸುತ್ತದೆ. ಪೋಷಕರ ನಡುವಿನ ಮುಂದುವರಿದಿರುವ ಜಗಳವೂ ಮಗುವಿನ ಹಿತದೃಷ್ಟಿಯಿಂದ ಒಳ್ಳೆಯದಲ್ಲ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ಹೀಗಾಗಿ, ಈ ವಿಶಿಷ್ಟ ಪ್ರಕರಣದಲ್ಲಿ ನ್ಯಾಯಾಲಯದ ಮಗುವಿನ ಪೋಷಕರ ವ್ಯಾಪ್ತಿಯನ್ನು ನಿಗದಿಗೊಳಿಸಬೇಕಾದ ಅಗತ್ಯವಿದೆ. ಇಂತಹ ವ್ಯಾಪ್ತಿಯನ್ನು ನಿಗದಿಗೊಳಿಸುವಾಗ ಮಗುವಿನ ಭವಿಷ್ಯ ಪ್ರಮುಖವೇ ಹೊರತು, ಪೋಷಕರ ಹಕ್ಕಲ್ಲ. ಮಗುವಿನ ಕಲ್ಯಾಣ, ಸಾಂಸ್ಕೃತಿಕ ಪರಿಗಣನೆಗಳು, ಪೋಷಕರ ಹಿತಾಸಕ್ತಿಗಳು ಹಾಗೂ ಸಾಮಾಜಿಕ ರೂಢಿಗಳನ್ನು ಗಣನೆಗೆ ತೆಗೆದುಕೊಂಡು ಮಗುವಿಗೆ ಹೆಸರನ್ನು ಆಯ್ಕೆ ಮಾಡಬೇಕಾದ ಕೆಲಸವನ್ನು ನ್ಯಾಯಾಲಯ ಮಾಡಲೇಬೇಕಿದೆ” ಎಂದು ಹೇಳಿದ್ದಾರೆ.
ಮಗುವಿಗೆ ಪುಣ್ಯ ಎಂದು ಹೆಸರಿಡಬೇಕು ಎಂಬುದು ತಾಯಿಯ ಬಯಕೆಯಾದರೆ, ಪದ್ಮ ಎಂದು ಇಡಬೇಕು ಎಂಬುದು ತಂದೆಯ ಬಯಕೆಯಾಗಿದೆ. ಇದರ ಪರಿಣಾಮವಾಗಿ, ಮಗುವಿಗೆ ತಾಯಿಯ ಆಯ್ಕೆಯ ಹೆಸರಾದ ‘ಪುಣ್ಯ’ ಎಂದು ಇಡಬೇಕು ಎಂದು ಕೋರ್ಟ್ ಆದೇಶಿಸಿದ್ದು, ಆ ಹೆಸರಿಗೆ ತಂದೆಯ ಆಯ್ಕೆಯ ಹೆಸರನ್ನು ಉಪನಾಮವನ್ನಾಗಿ ಇಡಬೇಕು ಎಂದು ಸೂಚಿಸಿದೆ.
“ಸದ್ಯ ಮಗುವು ತಾಯಿಯೊಂದಿಗೆ ವಾಸಿಸುತ್ತಿರುವುದರಿಂದ ತಾಯಿ ಸಲಹೆ ನೀಡಿರುವ ಹೆಸರಿಗೆ ಅಗತ್ಯ ಪ್ರಾಮುಖ್ಯತೆಯನ್ನು ನೀಡಬೇಕಿದೆ. ಅಲ್ಲದೆ, ಪೋಷಕತ್ವದ ಕುರಿತು ಯಾವುದೇ ತಗಾದೆ ಇಲ್ಲದೆ ಇರುವುದರಿಂದ ತಂದೆ ಸೂಚಿಸಿರುವ ಹೆಸರನ್ನೂ ಸೇರಿಸಬೇಕಿದೆ” ಎಂದು ಕೋರ್ಟ್ ಘೋಷಿಸಿದೆ.