ಮುಂಬೈ: ಹಿಜಾಬ್‌ ನಿಷೇಧ ನಿಯಮದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್‌

Update: 2024-06-26 10:12 GMT

ಸಾಂದರ್ಭಿಕ ಚಿತ್ರ | PTI 

 

ಮುಂಬೈ: ಮುಂಬೈನ ಎನ್‌ ಜಿ ಆಚಾರ್ಯ ಮತ್ತು ಡಿ ಕೆ ಮರಾಠೆ ಕಾಲೇಜಿನ ಒಂಬತ್ತು ವಿದ್ಯಾರ್ಥಿನಿಯರು ತಮ್ಮ ಸಂಸ್ಥೆಗಳಲ್ಲಿ ಹಿಜಾಬ್‌, ಬುರ್ಖಾ ನಿಷೇಧಿಸಿದ್ದನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಇಂದು ವಜಾಗೊಳಿಸಿದೆ.

ಕಾಲೇಜು ತೆಗೆದುಕೊಂಡ ನಿರ್ಧಾರದಲ್ಲಿ ಹಸ್ತಕ್ಷೇಪ ನಡೆಸಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್‌ ಚಂದುರ್ಕರ್‌ ಮತ್ತು ರಾಜೇಶ್‌ ಪಾಟೀಲ್‌ ಅವರ ವಿಭಾಗೀಯ ಪೀಠ ಹೇಳಿದೆ.

ಕಾಲೇಜುಗಳು ತಮ್ಮ ಕ್ಯಾಂಪಸ್‌ನಲ್ಲಿ ಹಿಜಾಬ್‌, ನಖಾಬ್‌, ಬುರ್ಖಾ, ಕ್ಯಾಪ್‌ ಧರಿಸುವುದನ್ನು ನಿಷೇಧಿಸಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ ನಂತರ ಎರಡನೇ ಮತ್ತು ಮೂರನೇ ವರ್ಷದ ವಿಜ್ಞಾನ ವಿಭಾಗದ ಕೆಲ ವಿದ್ಯಾರ್ಥಿನಿಯರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹೊಸ ವಸ್ತ್ರಸಂಹಿತೆ ತಮ್ಮ ಮೂಲಭೂತ ಹಕ್ಕುಗಳು, ಗೌಪ್ಯತೆ, ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿವೆ ಎಂದು ವಿದ್ಯಾರ್ಥಿನಿಯರು ಜೂನ್‌ 14ರಂದು ಸಲ್ಲಿಸಿದ್ದ ಅರ್ಜಿಯಲ್ಲಿ ದೂರಿದ್ದರು.

ಸಮಾನ ವಸ್ತ್ರ ಸಂಹಿತೆ ಹೊಂದುವ ನಿಟ್ಟಿನಲ್ಲಿ ಶಿಸ್ತು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಕೇವಲ ಮುಸ್ಲಿಂ ಸಮುದಾಯವನ್ನು ಈ ನಿಯಮ ಗುರಿಯಾಗಿಸಿಲ್ಲ ಎಂದು ಕಾಲೇಜಿನ ಆಡಳಿತ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News