ಮೇ ತಿಂಗಳಿನಲ್ಲಿ ಉತ್ತರದ ಬಯಲು ಪ್ರದೇಶ, ಮಧ್ಯ ಭಾರತದಲ್ಲಿ ಹೆಚ್ಚಿನ ಉಷ್ಣ ಅಲೆ : ಐಎಂಡಿ

Update: 2024-05-02 16:33 GMT

PC : PTI 

ಹೊಸದಿಲ್ಲಿ: ಮೇ ತಿಂಗಳಿನಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಗರಿಷ್ಠಕ್ಕಿಂತ ಹೆಚ್ಚಿನ ತಾಪಮಾನವಿರುವ ಸಾಧ್ಯತೆಯಿದೆ ಮತ್ತು ಉತ್ತರದ ಬಯಲು ಪ್ರದೇಶಗಳು, ಮಧ್ಯ ಭಾರತ ಮತ್ತು ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉಷ್ಣ ಅಲೆ ದಿನಗಳನ್ನು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರಾ ಅವರು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಸುಮಾರು ಮೂರು ಉಷ್ಣ ಅಲೆ ದಿನಗಳಿರುತ್ತವೆ.

ಈ ವರ್ಷದ ಎಪ್ರಿಲ್‌ನಲ್ಲಿ ಉಷ್ಣಅಲೆಗಳು ಈವರೆಗಿನ ಅತ್ಯಂತ ತಾಪಮಾನದ ವರ್ಷವೆಂದು ದಾಖಲಾಗಿರುವ 2023ಕ್ಕಿಂತ ಕೆಟ್ಟದ್ದಾಗಿದ್ದವು ಎನ್ನುವುದನ್ನು ಐಎಂಡಿ ದತ್ತಾಂಶಗಳು ತೋರಿಸಿವೆ.

ಈ ಪ್ರವೃತ್ತಿಯು ಮೇ ತಿಂಗಳಿನಲ್ಲಿಯೂ ಮುಂದುವರಿಯುವ ಸಾಧ್ಯತೆಯಿದ್ದು, ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ,ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡಾ ಹಾಗೂ ಗುಜರಾತ ಪ್ರದೇಶಗಳಲ್ಲಿ ಸುಮಾರು 8 ರಿಂದ 11 ಉಷ್ಣಅಲೆ ದಿನಗಳನ್ನು ನಿರೀಕ್ಷಿಸಲಾಗಿದೆ ಎಂದು ಮೊಹಾಪಾತ್ರಾ ತಿಳಿಸಿದರು.

ರಾಜಸ್ಥಾನದ ಉಳಿದ ಭಾಗಗಳು, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರ್ಯಾಣ, ಚಂಡಿಗಡ, ದಿಲ್ಲಿ, ಉತ್ತರ ಪ್ರದೇಶ, ಛತ್ತೀಸ್‌ಗಡದ ಕೆಲವು ಭಾಗಗಳು, ಪಶ್ಚಿಮ ಬಂಗಾಳದ ಗಂಗಾನದಿ ಬಯಲು, ಜಾರ್ಖಂಡ್, ಬಿಹಾರ, ಕರ್ನಾಟಕದ ಉತ್ತರ ಒಳನಾಡು ಮತ್ತು ತೆಲಂಗಾಣಗಳು ಮೇ ತಿಂಗಳಿನಲ್ಲಿ ಐದರಿಂದ ಏಳು ಉಷ್ಣ ಅಲೆ ದಿನಗಳನ್ನು ದಾಖಲಿಸಬಹುದು ಎಂದರು.

ಮೇ ತಿಂಗಳಿನಲ್ಲಿ ದೇಶದಲ್ಲಿ ಸಾಮಾನ್ಯ ಮಳೆ (ದೀರ್ಘಾವಧಿಯ ಸರಾಸರಿ ಶೇ.91ರಿಂದ ಶೇ.101ರಷ್ಟು)ಯಾಗುವ ನಿರೀಕ್ಷೆಯಿದೆ ಎಂದೂ ಮೊಹಾಪಾತ್ರಾ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News