ಹಿಂಡೆನ್‌ಬರ್ಗ್ ವರದಿಯಲ್ಲಿ ಹೆಸರಿಸಲಾದ ಎರಡು ಎಫ್‌ಪಿಐಗಳಿಂದ ಸೆಬಿ ನಿಯಮಗಳನ್ನು ಪ್ರಶ್ನಿಸಿ ಎಸ್‌ಎಟಿಗೆ ಅಹವಾಲು

Update: 2024-09-08 12:04 GMT

SEBI | PC : PTI

ಹೊಸದಿಲ್ಲಿ : ಅದಾನಿ ಗ್ರೂಪ್ ಕುರಿತು ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್‌ನ 2023ರ ವರದಿಯಲ್ಲಿ ಹೆಸರಿಸಲಾಗಿದ್ದ ಮಾರಿಷಸ್ ಮೂಲದ ಎರಡು ವಿದೇಶಿ ಬಂಡವಾಳ ಹೂಡಿಕೆ ಸಂಸ್ಥೆ (ಎಫ್‌ಪಿಐ)ಗಳು ಸೆಬಿಯ ನೂತನ ವಿದೇಶಿ ಹೂಡಿಕೆದಾರ ನಿಯಮಗಳನ್ನು ಪಾಲಿಸುವುದರಿಂದ ತುರ್ತು ಪರಿಹಾರವನ್ನು ಕೋರಿ ಸೆಕ್ಯೂರಿಟಿಸ್ ಮೇಲ್ಮನವಿ ನ್ಯಾಯಮಂಡಳಿ(ಎಸ್‌ಎಟಿ)ಗೆ ಅರ್ಜಿ ಸಲ್ಲಿಸಿವೆ. ಸೆಬಿ ನಿಯಮಗಳನ್ನು ಪಾಲಿಸಲು ಇವುಗಳಿಗೆ ಸೆ.9 ಅಂತಿಮ ಗಡುವು ಆಗಿದೆ.

ನಿಯಮಗಳನ್ನು ಉಲ್ಲಂಘಿಸುವ ಅದಾನಿ ಗ್ರೂಪ್‌ನ ರಾಜಾರೋಷ ಯತ್ನಗಳ ಕುರಿತು ಸೆಬಿ ತನಿಖೆಯು ಇನ್ನೂ ಮಂದಗತಿಯಲ್ಲಿದೆ ಎಂದು ರವಿವಾರ ಆರೋಪಿಸಿರುವ ಕಾಂಗ್ರೆಸ್, ಸೆಬಿ ವಿವರಿಸಬೇಕಾದ್ದು ಬಹಳಷ್ಟಿದೆ ಎಂದು ಹೇಳಿದೆ.

ಹೂಡಿಕೆದಾರರು ಒಂದೇ ಶೇರುಗಳಲ್ಲಿ ಅತಿಯಾದ ಹೂಡಿಕೆಯನ್ನು ಮಾಡುವಂತಿಲ್ಲ ಎಂಬ ನಿಯಮವನ್ನು ಇವೆರಡೂ ಎಫ್‌ಪಿಐಗಳು ಉಲ್ಲಂಘಿಸಿವೆ ಎಂದು ರವಿವಾರ ಬೆಟ್ಟು ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್‌ ಅವರು,‘ಕಪ್ಪುಹಣವು ತೆರಿಗೆ ಸ್ವರ್ಗಗಳ ಮೂಲಕ ಭಾರತೀಯ ಬಂಡವಾಳ ಮಾರುಕಟ್ಟೆಗೆ ಮರಳದಂತೆ ನೋಡಿಕೊಳ್ಳುವುದು ಈ ನಿಯಮಗಳ ಉದ್ದೇಶವಾಗಿದೆ ಮತ್ತು ಯಾವುದೇ ಸಂದರ್ಭದಲ್ಲಿಯೂ ಈ ನಿಯಮಗಳ ಪಾಲನೆಯಾಗಬೇಕು’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇವು ಸೆಬಿ ನಿಯಮಗಳನ್ನು ಉಲ್ಲಂಘಿಸಿದ್ದ ಮತ್ತು ತನ್ನದೇ ಕಂಪನಿಗಳಲ್ಲಿ ಬೇನಾಮಿ ಪಾಲು ಬಂಡವಾಳವನ್ನು ಸಂಗ್ರಹಿಸಿದ್ದ ಅದಾನಿ ಗ್ರೂಪ್‌ನ ಪ್ರಯತ್ನದಲ್ಲಿ ಭಾಗಿಯಾಗಿದ್ದ ಆರೋಪವನ್ನು ಎದುರಿಸುತ್ತಿರುವ ಎಫ್‌ಪಿಐಗಳಾಗಿವೆ ಎಂದು ಹೇಳಿರುವ ರಮೇಶ್‌, ಸಾಗರೋತ್ತರ ನಿಧಿಗಳ ‘ಅಂತಿಮ ಲಾಭದಾಯಕ ಮಾಲಿಕ’ರನ್ನು ಗುರುತಿಸುವ ಅಗತ್ಯವನ್ನು ತೆಗೆದುಹಾಕಿದ ಸೆಬಿ ಕ್ರಮದ ಲಾಭವನ್ನು ಈ ಎಫ್‌ಪಿಐಗಳು ಪಡೆದುಕೊಂಡಿವೆ ಎಂದು ಬರೆದಿದ್ದಾರೆ.

ಈ ಉಲ್ಲಂಘನೆಗಳ ಕುರಿತು ಸೆಬಿ ತನಿಖೆಯ ಅಗತ್ಯವನ್ನು ಪುನರುಚ್ಚರಿಸಿರುವ ಅವರು, ತನಿಖೆಯು ಎರಡು ತಿಂಗಳುಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ 18 ತಿಂಗಳುಗಳು ಕಳೆದರೂ ಅದು ಪೂರ್ಣಗೊಂಡಿಲ್ಲ ಎಂದು ಬೆಟ್ಟು ಮಾಡಿದ್ದಾರೆ. ಸೆಬಿ ಈಗ ಅನಾವರಣಗೊಳ್ಳುತ್ತಿರುವ ತನ್ನ ಅಧ್ಯಕ್ಷರ ಹಲವಾರು ಹಿತಾಸಕ್ತಿ ಸಂಘರ್ಷಗಳಲ್ಲದೆ ಇನ್ನೂ ಬಹಳಷ್ಟನ್ನು ವಿವರಿಸಬೇಕಿದೆ ಎಂದಿದ್ದಾರೆ.

ಹಿಂಡೆನ್‌ಬರ್ಗ್ ರಿಸರ್ಚ್ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ವಿರುದ್ಧ ಹೊಸ ದಾಳಿಯನ್ನು ಆರಂಭಿಸಿದ ವಾರಗಳ ಬಳಿಕ ರಮೇಶ್‌ ಅವರ ಈ ಹೇಳಿಕೆಗಳು ಹೊರಬಿದ್ದಿವೆ. ಅದಾನಿ ಗ್ರೂಪ್‌ನಿಂದ ಹಣ ದುರ್ಬಳಕೆ ಹಗರಣದಲ್ಲಿ ಬಳಕೆಯಾಗಿದ್ದ ಅಸ್ಪಷ್ಟ ಸಾಗರೋತ್ತರ ನಿಧಿಗಳಲ್ಲಿ ಬುಚ್ ಮತ್ತು ಅವರ ಪತಿ ಹೂಡಿಕೆಗಳನ್ನು ಹೊಂದಿದ್ದರು ಎಂದು ಹಿಂಡೆನ್‌ಬರ್ಗ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News