ಹಿಂದಿ ರಾಷ್ಟ್ರಭಾಷೆ, ಆ ಭಾಷೆಯಲ್ಲಿಯೇ ಸಾಕ್ಷ್ಯ ಹೇಳಬೇಕು ಎಂದು ಅರ್ಜಿದಾರರಿಗೆ ಹೇಳಿದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ

Update: 2023-08-04 10:26 GMT

ಹೊಸದಿಲ್ಲಿ: ದೇಶದ ರಾಷ್ಟ್ರ ಭಾಷೆ ಹಿಂದಿ ಆಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್‌ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಕೆಲ ಸಾಕ್ಷಿಗಳಿಗೆ ಉತ್ತರ ಪ್ರದೇಶದ ನ್ಯಾಯಾಲಯದ ಮುಂದೆ ಹಿಂದಿಯಲ್ಲಿ ಸಾಕ್ಷ್ಯ ನುಡಿಯುವಂತೆ  ನಿರ್ದೇಶನ ನೀಡಿದೆ. ಸಂವಿಧಾನದ ಪ್ರಕಾರ ಭಾರತಕ್ಕೆ ಯಾವುದೇ ರಾಷ್ಟ್ರಭಾಷೆಯಿಲ್ಲ. ಸಂವಿಧಾನದ ಎಂಟನೇ ಶೆಡ್ಯೂಲ್‌ ಪ್ರಕಾರ 22 ನಿಯೋಜಿತ ಅಧಿಕೃತ ಭಾಷೆಗಳಿವೆ.

ಆದರೂ ನ್ಯಾಯಮೂರ್ತಿ ದೀಪಾಂಕರ್‌ ದತ್ತಾ ತಮ್ಮ ಆದೇಶದಲ್ಲಿ ಹೀಗೆ ಹೇಳಿದ್ದಾರೆ- “ಕನಿಷ್ಠ 22 ಅಧಿಕೃತ ಭಾಷೆಗಳಿವೆ. ಆದರೆ ಹಿಂದಿ ರಾಷ್ಟ್ರ ಭಾಷೆ ಆಗಿರುವುದರಿಂದ ಅರ್ಜಿದಾರರು ಹಾಜರುಪಡಿಸುವ ಸಾಕ್ಷಿಗಳು ತಮ್ಮ ಸಾಕ್ಷ್ಯವನ್ನು ಹಿಂದಿಯಲ್ಲಿ ನೀಡಬೇಕು.”

ಉತ್ತರ ಪ್ರದೇಶದ ಫರುಕ್ಕಾಬಾದ್‌ನಲ್ಲಿ ಮೋಟಾರ್‌ ವಾಹನಗಳ ಅಪಘಾತಗಳ ಕ್ಲೇಮ್‌ ಟ್ರಿಬ್ಯುನಲ್‌ನಲ್ಲಿ ಬಾಕಿಯಿರುವ ಒಂದು ಅಪಘಾತ ಪ್ರಕರಣವನ್ನು ಪಶ್ಚಿಮ ಬಂಗಾಳದ ದಾರ್ಜಲಿಂಗ್‌ಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಮೇಲಿನ ಆದೇಶ ಹೊರಡಿಸಲಾಗಿದೆ.

ಅಪಘಾತವು ಸಿಲಿಗುರಿಯಲ್ಲಿ ನಡೆದಿರುವುದರಿಂದ ದಾರ್ಜಿಲಿಂಗ್‌ನ ಟ್ರಿಬ್ಯುನಲ್‌ನಲ್ಲಿ ವಿಚಾರಣೆ ನಡೆದರೆ ಅನುಕೂಲಕರ ಎಂದು ಅರ್ಜಿದಾರರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅರ್ಜಿದಾರರ ಪರ ಎಲ್ಲಾ ಸಾಕ್ಷಿಗಳೂ ಸಿಲಿಗುರಿಯವರಾಗಿರುವುದರಿಂದ ಉತ್ತರ ಪ್ರದೇಶ ಟ್ರಿಬ್ಯುನಲ್‌ನಲ್ಲಿ ಭಾಷೆಯ ಸಮಸ್ಯೆ ಎದುರಾಗಬಹುದು ಎಂದಿದ್ದರು.

ಆದರೆ ಈ ಅಪೀಲನ್ನು ತಿರಸ್ಕರಿಸಿದ ದತ್ತಾ, ಅರ್ಜಿದಾರರ ವಾದವನ್ನು ಒಪ್ಪಿದಲ್ಲಿ, ಕ್ಲೇಮ್‌ ಮಾಡುವವರು ಅನಾನುಕೂಲ ಎದುರಿಸಬಹುದು ಹಾಗೂ ತಮ್ಮ ವಾದವನ್ನು ಬಂಗಾಳಿ ಭಾಷೆಯಲ್ಲಿ ಮಂಡಿಸಲು ಕಷ್ಟಪಡಬಹುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News