ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಹಿಂದುಗಳು ಅನುಮತಿ ಪಡೆದುಕೊಳ್ಳಬೇಕು : ಗುಜರಾತ್ ಸರಕಾರ
ಅಹ್ಮದಾಬಾದ್: ಬೌದ್ಧ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿ ಗುಜರಾತ್ ಸರಕಾರವು ಸುತ್ತೋಲೆಯೊಂದನ್ನು ಹೊರಡಿಸಿದೆ. ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳಿಗೆ ಮತಾಂತರಗೊಳ್ಳಲು ಬಯಸುವ ಹಿಂದುಗಳು ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 2003ರಡಿ ಸಂಬಂಧಿತ ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು ಎಂದು ಅದು ತಿಳಿಸಿದೆ.
ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಅನುಮತಿ ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ನಿಯಮಗಳಿಗೆ ಅನುಸಾರವಾಗಿ ಸಂಸ್ಕರಿಸಲಾಗುತ್ತಿಲ್ಲ ಎನ್ನುವುದು ಸರಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆಯು ಎ.8ರಂದು ಸುತ್ತೋಲೆಯನ್ನು ಹೊರಡಿಸಿದ್ದು, ಉಪ ಕಾರ್ಯದರ್ಶಿ (ಗೃಹ) ವಿಜಯ ಬಧೇಕಾ ಅವರು ಸಹಿ ಮಾಡಿದ್ದಾರೆ.
ಗುಜರಾತಿನಲ್ಲಿ ಪ್ರತಿ ವರ್ಷ ದಸರಾ ಮತ್ತು ಇತರ ಉತ್ಸವಗಳ ಸಂದರ್ಭಗಳಲ್ಲಿ ಪ್ರಮುಖವಾಗಿ ದಲಿತರ ದೊಡ್ಡ ಗುಂಪುಗಳು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತವೆ.
ಜಿಲ್ಲಾಧಿಕಾರಿಗಳ ಕಚೇರಿಗಳು ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯನ್ನು ನಿರಂಕುಶವಾಗಿ ವ್ಯಾಖ್ಯಾನಿಸುತ್ತಿವೆ ಎಂದು ಬೆಟ್ಟು ಮಾಡಿರುವ ಸುತ್ತೋಲೆಯು, ಹಿಂದು ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರವನ್ನು ಬಯಸಿ ಸಲ್ಲಿಸಲಾಗುತ್ತಿರುವ ಅರ್ಜಿಗಳಲ್ಲಿ ನಿಯಮಾನುಸಾರ ಕಾರ್ಯವಿಧಾನಗಳನ್ನು ಅನುಸರಿಸದಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಕೆಲವೊಮ್ಮೆ ಅರ್ಜಿದಾರರಿಂದ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಹಿಂದು ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಕ್ಕೆ ಪೂರ್ವಾನುಮತಿ ಅಗತ್ಯವಿಲ್ಲ ಎಂಬ ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಹೇಳಿದೆ.
ಪೂರ್ವಾನುಮತಿಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಪ್ರಕರಣಗಳಲ್ಲಿ ಸಂಬಂಧಿತ ಅಧಿಕಾರಿಗಳು ಸಂವಿಧಾನದ ವಿಧಿ 25 (2)ರಡಿ ಸಿಖ್,ಜೈನ ಮತ್ತು ಬೌದ್ಧ ಧರ್ಮಗಳನ್ನು ಹಿಂದು ಧರ್ಮದಲ್ಲಿ ಸೇರಿಸಲಾಗಿದೆ, ಹೀಗಾಗಿ ಅರ್ಜಿದಾರರು ಇಂತಹ ಧಾರ್ಮಿಕ ಮತಾಂತರಗಳಿಗೆ ಅನುಮತಿಯನ್ನು ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತಾರೆ. ಕಾನೂನು ನಿಬಂಧನೆಗಳ ಸಾಕಷ್ಟು ಅಧ್ಯಯನ ಮಾಡದೇ ಧಾರ್ಮಿಕ ಮತಾಂತರಗಳಂತಹ ಸೂಕ್ಷ್ಮ ವಿಷಯಗಳಲ್ಲಿ ಅರ್ಜಿದಾರರಿಗೆ ನೀಡಲಾದ ಉತ್ತರಗಳು ನ್ಯಾಯಾಂಗ ದಾವೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಂತೆ ಬೌದ್ಧ ಧರ್ಮವನ್ನು ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸಬೇಕು. ಕಾಯ್ದೆಯ ಪ್ರಕಾರ ಇನ್ನೋರ್ವ ವ್ಯಕ್ತಿಯನ್ನು ಹಿಂದು ಧರ್ಮದಿಂದ ಬೌದ್ಧ/ಸಿಖ್/ಜೈನ ಧರ್ಮಕ್ಕೆ ಮತಾಂತರಿಸುವ ವ್ಯಕ್ತಿಯು ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. ಅಲ್ಲದೆ ಮತಾಂತರಗೊಳ್ಳುವ ವ್ಯಕ್ತಿಯೂ ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿರುವ ಸುತ್ತೋಲೆಯು, ಕಾನೂನು ನಿಬಂಧನೆಗಳ ವಿವರವಾದ ಅಧ್ಯಯನ ಮತ್ತು ರಾಜ್ಯ ಸರಕಾರವು ಹೊರಡಿಸಿರುವ ಸೂಚನೆಗಳನ್ನು ಅನುಸರಿಸಿ ಧಾರ್ಮಿಕ ಮತಾಂತರದ ಅರ್ಜಿಗಳನ್ನು ಇತ್ಯರ್ಥಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.