1931ರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ತಡೆಯಲು ಗೃಹ ಬಂಧನ: ಮೆಹಬೂಬಾ ಮುಫ್ತಿ ಆರೋಪ
ಶ್ರೀನಗರ, ಜು. 13: 1931ರಲ್ಲಿ ದೋಗ್ರಾ ಆಡಳಿತಗಾರರ ಸೇನೆ 22 ಕಾಶ್ಮೀರಿಗಳನ್ನು ಹತ್ಯೆಗೈದ ದಿನವಾದ ಗುರುವಾರ ಈ ಹುತಾತ್ಮ ಕಾಶ್ಮೀರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಂತೆ ತನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿಯ ವರಿಷ್ಠೆ ಮೆಹಬೂಬಾ ಮುಫ್ತಿ ಗುರುವಾರ ಆರೋಪಿಸಿದ್ದಾರೆ.
ನಮ್ಮ ಚರಿತ್ರೆಯನ್ನು ವಿರೂಪಗೊಳಿಸಲು ಅಥವಾ ನಮ್ಮ ನಾಯಕರನ್ನು ಮರೆಯುವಂತೆ ಮಾಡಲು ಬಿಜೆಪಿಗೆ ತಾನು ಅವಕಾಶ ನೀಡಲಾರೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ‘‘ನಾನು ಇಂದು ಕಾಶ್ಮೀರಿ ಹುತಾತ್ಮರ ಸಮಾಧಿಗೆ ಭೇಟಿ ನೀಡಲು ಬಯಸಿದ್ದೆ.
ಆದರೆ ನನ್ನನ್ನ ಗೃಹ ಬಂಧನದಲ್ಲಿ ಇರಿಸಲಾಗಿದೆ’’ ಎಂದು ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ. ನಗರದ ಹೊರವಲಯದ ಖಿಂಬರ್ ಪ್ರದೇಶದಲ್ಲಿರುವ ತನ್ನ ನಿವಾಸದ ಮುಖ್ಯ ಗೇಟಿಗೆ ಹೊರಗಿನಿಂದ ಬೀಗ ಹಾಕಿರುವುದನ್ನು ತೋರಿಸುವ ಫೋಟೊ ಹಾಗೂ ವೀಡಿಯೊಗಳನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ. ‘‘ದ್ವೇಷ ಹಾಗೂ ವಿಭಜನೆಯನ್ನು ಹರಡುವ ನಾಯಕರಾದ ವೀರ ಸಾವರ್ಕಕರ್, ಶ್ಯಾಮ್ ಪ್ರಸಾದ್ ಮುಖರ್ಜಿ, ಗೋವಾಳ್ಕರ್ ಹಾಗೂ ಗೋಡ್ಸೆಯನ್ನು ಬಿಜೆಪಿ ನಮ್ಮ ಮೇಲೆ ಹೇರಲು ಸಾಧ್ಯವಿಲ್ಲ.
ನಾವು ಜಮ್ಮು ಹಾಗೂ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬೇರೂರಲು ಪ್ರಾಣ ತ್ಯಾಗ ಮಾಡಿದವರಿಗೆ ಯಾವಾಗಲೂ ಗೌರವ ನೀಡುತ್ತೇವೆ. ಈ ಹುತಾತ್ಮರ ದಿನವಾದ ಇಂದು ನಾನು ನಿರಂಕುಶಾಧಿಕಾರಿಗಳ ವಿರುದ್ಧ ಶೌರ್ಯದಿಂದ ಹೋರಾಡಿದ ಈ ಕಾಶ್ಮೀರಿಗಳಿಗೆ ವಂದಿಸುತ್ತೇನೆ’’ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.