ಬಿಜೆಪಿ ಮತ್ತು ಕಾಂಗ್ರೆಸ್ ಹೇಗೆ ಭಿನ್ನ?: ವಿದ್ಯಾರ್ಥಿಗಳ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ…
ಹೊಸದಿಲ್ಲಿ: ಸಂಪನ್ಮೂಲಗಳ ವಿತರಣೆಯನ್ನು ಹೆಚ್ಚು ನ್ಯಾಯಯುತವಾಗಿ ಮಾಡಬೇಕು ಮತ್ತು ಬೆಳವಣಿಗೆಯು ವಿಶಾಲ ಮತ್ತು ಎಲ್ಲರನ್ನೂ ಒಳಗೊಂಡಿರಬೇಕು ಎಂಬುವುದನ್ನು ಕಾಂಗ್ರೆಸ್ ಪಕ್ಷವು ನಂಬುತ್ತದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಹೇಗೆ ಭಿನ್ನ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಐಐಟಿ ಮದ್ರಾಸ್ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಬೆಳವಣಿಗೆಯಲ್ಲಿ ಆರ್ಥಿಕ ಪರಿಭಾಷೆಯ 'ಟ್ರಿಪಲ್-ಡೌನ್' ಎಂಬುದನ್ನು ನಂಬುತ್ತದೆ. ಆದರೆ ಸಾಮಾಜಿಕವಾಗಿ ಹೆಚ್ಚು ಸಾಮರಸ್ಯ, ಸಂಘರ್ಷಗಳಲ್ಲಿ ಇಳಿಕೆ ದೇಶಕ್ಕೆ ಉತ್ತಮವಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಖಾಸಗೀಕರಣ ಮತ್ತು ಆರ್ಥಿಕವಾಗಿ ಪ್ರೋತ್ಸಾಹದಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದ ರಾಹುಲ್ ಗಾಂಧಿ, ಸರ್ಕಾರಗಳು ಶಿಕ್ಷಣಕ್ಕಾಗಿ ಹೆಚ್ಚು ವ್ಯಯಿಸುವ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸುವ ಮಹತ್ವವನ್ನು ಒತ್ತಿಹೇಳಿದ್ದಾರೆ.
ದೇಶದ ಜನರಿಗೆ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ ಎಂದು ನಾನು ನಂಬುತ್ತೇನೆ. ಇದನ್ನು ಖಾಸಗೀಕರಣ ಮತ್ತು ಆರ್ಥಿಕ ಪ್ರೋತ್ಸಾಹದ ಮೂಲಕ ಸಾಧಿಸುವುದು ಅಸಾಧ್ಯ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಸಾವಿರಾರು ಮಕ್ಕಳೊಂದಿಗೆ ನೀವು ಮುಂದಕ್ಕೆ ಏನಾಗಬೇಕೆಂದಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ವಕೀಲರು, ವೈದ್ಯರು, ಇಂಜಿನಿಯರ್ ಅಥವಾ ಸೈನಿಕರಾಗಲು ಬಯಸಿರುವುದಾಗಿ ಹೇಳಿದ್ದರು. ಈ ದೇಶದಲ್ಲಿ ಕಲಿಯಲು ಕೇವಲ ಈ ಐದು ವಿಷಯಗಳಿವೆ ಎಂದಾಗಬಾರದು. ಆದರೆ ನಮ್ಮ ವ್ಯವಸ್ಥೆಯು ಅದಕ್ಕೆ ತಳ್ಳುತ್ತಿದೆ. ಓರ್ವ ವೈದ್ಯ, ವಕೀಲ, ಐಎಎಸ್, ಐಪಿಎಸ್ ಆದರೆ ಮಾತ್ರ ಶಿಕ್ಷಣದ ಯಶಸ್ಸನ್ನು ಸೂಚಿಸುತ್ತದೆ. ಇದನ್ನು ನಮ್ಮ ಜನಸಂಖ್ಯೆಯ ಕೇವಲ ಒಂದು ಪ್ರತಿಶತ ಅಥವಾ ಎರಡು ಪ್ರತಿಶತ ಜನರು ಮಾತ್ರ ಮಾಡುತ್ತಾರೆ. ನಮ್ಮ ಜನಸಂಖ್ಯೆಯ 90 ಪ್ರತಿಶತ ಜನರು ಇದಕ್ಕೆ ಎಂದಿಗೂ ಪ್ರಯತ್ನಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.