ಪಿಎಂ ಕೇರ್ಸ್ ನಿಧಿಗೆ ಹರಿದು ಬಂದ ಸಾವಿರಾರು ಕೋಟಿ ದೇಣಿಗೆ ಬಗ್ಗೆ 2 ವರ್ಷಗಳಿಂದ ಲೆಕ್ಕ ಕೊಡದ ಸರಕಾರ: ಸಾಕೇತ್ ಗೋಖಲೆ ಆರೋಪ

Update: 2024-10-04 09:24 GMT

ಸಂಸದ ಸಾಕೇತ್ ಗೋಖಲೆ (Photo credit: telegraphindia)

ಹೊಸದಿಲ್ಲಿ: ಪಿಎಂ ಕೇರ್ಸ್ (PM-CARES) ಪರಿಹಾರ ನಿಧಿ ನಿರ್ವಹಣೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ. ಕಳೆದ 2 ವರ್ಷಗಳಿಂದ ಪಿಎಂ ಕೇರ್ಸ್ ಪರಿಹಾರ ನಿಧಿಗೆ ಹರಿದು ಬಂದ ಸಾವಿರಾರು ಕೋಟಿ ರೂ. ದೇಣಿಗೆ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ ಎಂದು ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಾಕೇತ್ ಗೋಖಲೆ, ಕೋವಿಡ್ -19 ಸಾಂಕ್ರಾಮಿಕದ ವೇಳೆ ಮೋದಿ ಪಿಎಂ-ಕೇರ್ಸ್ ಫಂಡ್ ಎಂಬ ಹೊಸ ಹಗರಣವನ್ನು ಪ್ರಾರಂಭಿಸಿದರು. ಅದನ್ನು "ಚಾರಿಟೇಬಲ್ ಟ್ರಸ್ಟ್" ಎಂದು ಕರೆಯಲಾಗಿತ್ತು. ಈ ನಿಧಿಗೆ ಭಾರತ ಮತ್ತು ವಿದೇಶಿ ಕಂಪನಿಗಳಿಂದ ಸಾವಿರಾರು ಕೋಟಿ ದೇಣಿಗೆ ಬಂದಿದೆ ಎಂದು ಹೇಳಿದ್ದಾರೆ.

ಪಿಎಂ-ಕೇರ್ಸ್ ಫಂಡ್ ಬಗ್ಗೆ ಮಾಹಿತಿ ನೀಡುವಂತೆ ಗದ್ದಲ ಮಾಡಿದ ಬಳಿಕ ಪಿಎಂ-ಕೇರ್ಸ್ ಫಂಡ್ ಗೆ ಹರಿದು ಬಂದ ನಿಧಿ ಮತ್ತು ವೆಚ್ಚಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. 2022ರ ಮಾ.31ರಂದು ಕೊನೆಯ ಬಾರಿಗೆ ಡೇಟಾ ಬಿಡುಗಡೆ ಮಾಡಲಾಗಿದೆ. ಆದರೆ ಕಳೆದ 2 ವರ್ಷಗಳಿಂದ PM-CARES ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

ಚುನಾವಣಾ ಬಾಂಡ್ಗಳು ಕಾನೂನುಬಾಹಿರವೆಂದು ಘೋಷಿಸಲ್ಪಟ್ಟ ನಂತರ, ಪಿಎಂ-ಕೇರ್ಸ್ ಫಂಡ್ ಕಂಪನಿಗಳನ್ನು ಸುಲಿಗೆ ಮಾಡಲು ಮತ್ತು ಅನಾಮಧೇಯ ದೇಣಿಗೆಗಳನ್ನು ಸಂಗ್ರಹಿಸಲು ಬಿಜೆಪಿಗೆ ಹೊಸ ವೇದಿಕೆಯಾಗಿದೆ. RTI ಅಡಿಯಲ್ಲಿ ಈ ಕುರಿತು ಮಾಹಿತಿ ನೀಡಲು ಪ್ರಧಾನಿ ಕಚೇರಿ ನಿರಾಕರಿಸಿದೆ ಎಂದು ಹೇಳಿದ್ದಾರೆ.

ದಿಲ್ಲಿ ಹೈಕೋರ್ಟ್ ನಲ್ಲಿ ಮೋದಿ ಸರ್ಕಾರವು PM-CARES ಒಂದು ಖಾಸಗಿ ಟ್ರಸ್ಟ್ ಎಂದು ಹೇಳಿಕೊಂಡಿದೆ ಮತ್ತು ಟ್ರಸ್ಟ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಜವಾಬ್ದಾರನಾಗಿರುವುದಿಲ್ಲ ಎಂದು ಹೇಳಿಕೊಂಡಿದೆ. ಖಾಸಗಿ ನಿಧಿಯಾಗಿದ್ದರೆ ಪಿಎಂ ಕೇರ್ಸ್ ಫಂಡ್ ಎಂಬ ಹೆಸರನ್ನು ಯಾಕೆ ಇಡಲಾಗಿದೆ? ಖಾಸಗಿ ನಿಧಿಗೆ ಭಾರತದ ರಾಷ್ಟ್ರೀಯ ಲಾಂಛನ ಮತ್ತು ಸರಕಾರಿ ವೆಬ್ ಸೈಟ್ ವಿಳಾಸ ಹೇಗೆ ಬಳಸಲಾಗಿದೆ ಎಂದು ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News