ಪಾರ್ಟಿಗಳಿಗೆ ಹಾವಿನ ವಿಷ ಪೂರೈಸಲು ವರ್ಚುವಲ್ ಸಂಖ್ಯೆ ಬಳಸುತ್ತಿದ್ದ ಎಲ್ವಿಶ್ ಯಾದವ್!
ಹೊಸದಿಲ್ಲಿ: ರೇವ್ ಪಾರ್ಟಿಗಳಿಗೆ ಹಾವಿನ ವಿಷ ಪೂರೈಸಲು ಮತ್ತು ಹಾವಾಡಿಗರಿಗೆ ಸೂಚನೆಗಳನ್ನು ಕಳುಹಿಸಲು ಯೂಟ್ಯೂಬರ್ ಎಲ್ವಿಶ್ ಯಾದವ್ ವರ್ಚುವಲ್ ಫೋನ್ ಸಂಖ್ಯೆಯನ್ನು ಬಳಸಿದ್ದಾರೆ ಎಂದು ನೋಯ್ಡಾ ಪೊಲೀಸರು ನಿನ್ನೆ ಉತ್ತರ ಪ್ರದೇಶದ ನ್ಯಾಯಾಲಯಕ್ಕೆ ಸಲ್ಲಿಸಿದ 1,200 ಪುಟಗಳ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.
ಎಂಟು ಆರೋಪಿಗಳನ್ನು ಹೆಸರಿಸುವ ಮತ್ತು 24 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿರುವ ಚಾರ್ಜ್‌ಶೀಟ್, ಯೂಟ್ಯೂಬರ್ ಪಾರ್ಟಿಗಳಿಗೆ ವಿಷವನ್ನು ಹೇಗೆ ಪೂರೈಸುತ್ತಿದ್ದರು ಎಂಬ ಆಘಾತಕಾರಿ ವಿವರಗಳನ್ನು ಹೊಂದಿದೆ. ಇದಕ್ಕಾಗಿ ಅವರು ವರ್ಚುವಲ್ ಫೋನ್ ಸಂಖ್ಯೆಯನ್ನು ಬಳಸಿದ್ದಾರೆ ಎಂದು ನೋಯ್ಡಾ ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಗೌಪ್ಯತೆ ಮತ್ತು ಲೋಕೇಶನ್ ಕಂಡು ಹಿಡಿಯುವುದು ಅಷ್ಟು ಸುಲಭವಲ್ಲದ ಕಾರಣ ಎಲ್ವಿಶ್ ವರ್ಚುವಲ್ ಸಂಖ್ಯೆ ಬಳಸುತ್ತಿದ್ದರು ಎನ್ನಲಾಗಿದೆ.
ಪಾರ್ಟಿಯನ್ನು ಆಯೋಜಿಸಿದಾಗ ಮತ್ತು ಅವುಗಳಿಗೆ ವಿಷದ ಅಗತ್ಯವಿದ್ದಾಗ, ಎಲ್ವಿಶ್ ಯಾದವ್ ತನ್ನ ಸ್ನೇಹಿತ ವಿನಯ್‌ಗೆ ಕರೆ ಮಾಡಲು ವರ್ಚುವಲ್ ಸಂಖ್ಯೆಯನ್ನು ಬಳಸುತ್ತಿದ್ದರು ಎಂದು ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಎಲ್ವಿಶ್ ರ ಕರೆ ಬಂದ ನಂತರ ವಿನಯ್ ಸೂಚನೆಗಳನ್ನು ಈಶ್ವರ್‌ಗೆ ತಿಳಿಸುತ್ತಾನೆ, ಆತ ಅವುಗಳನ್ನು ಹಾವಾಡಿಗರಿಗೆ ರವಾನಿಸುತ್ತಿದ್ದ ಎನ್ನಲಾಗಿದೆ.
ಸೂಚನೆ ಸಿಕ್ಕ ಬಳಿಕ ಹಾವಾಡಿಗರು ತಮ್ಮ ಹಾವುಗಳೊಂದಿಗೆ ಪಾರ್ಟಿಯ ಸ್ಥಳಕ್ಕೆ ತಲುಪುತ್ತಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ವಿನಯ್ ಅವರ ಕರೆ ದಾಖಲೆಗಳಲ್ಲಿ ಎಲ್ವಿಶ್ ಅವರ ವರ್ಚುವಲ್ ಸಂಖ್ಯೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಎಲ್ವಿಶ್, ವಿನಯ್ ಮತ್ತು ಈಶ್ವರ್ ಅವರನ್ನು ಕಳೆದ ತಿಂಗಳು ವಿಚಾರಣೆಗಾಗಿ ಬಂಧಿಸಲಾಗಿತ್ತು. ಸಧ್ಯ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ.
ಈಶ್ವರ್ ಒಡೆತನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವುಗಳಿಂದ ವಿಷವನ್ನು ಹೊರತೆಗೆಯಲಾಗುತ್ತಿತ್ತು ಎಂದು ನೋಯ್ಡಾ ಪೊಲೀಸರು ಹೇಳಿದ್ದಾರೆ. ಎಲ್ವಿಶ್ ಯಾದವ್, ಈಗ ಜೈಲಿನಲ್ಲಿರುವ ಹಾವಾಡಿಗರಿರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಆರೋಪಪಟ್ಟಿ ಹೇಳುತ್ತದೆ. ಯೂಟ್ಯೂಬರ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟನ್ಸ್ ಆಕ್ಟ್, 1985 ರ ಸೆಕ್ಷನ್‌ಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಾವಾಡಿಗರರಿಂದ ವಶಪಡಿಸಿಕೊಂಡ ವಿಷವು ನಾಗರಹಾವಿನ ಜಾತಿಗೆ ಸೇರಿದ ಕಟ್ಟು ಹಾವು (ಇಂಡಿಯನ್ ಕ್ರೈಟ್) ಗಳಿಗೆ ಸೇರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿದ್ಯಾ ಸಾಗರ್ ಮಿಶ್ರಾ ಹೇಳಿದ್ದಾರೆ. " ಸಾಕ್ಷಿಗಳ ಹೇಳಿಕೆಗಳೊಂದಿಗೆ ಎಲ್ಲಾ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದೇವೆ. ಇದರೊಂದಿಗೆ ಮುಂಬೈನ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ತಜ್ಞರ ವರದಿಯೂ ಇದೆ", ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ನೋಯ್ಡಾದ ಸೆಕ್ಟರ್ 51 ರಲ್ಲಿನ ಬ್ಯಾಂಕ್ವೆಟ್ ಹಾಲ್‌ನಿಂದ ಐದು ಹಾವಾಡಿಗರನ್ನು ಒಂಭತ್ತು ಹಾವುಗಳೊಂದಿಗೆ ಬಂಧಿಸಲಾಗಿತ್ತು. ಅವುಗಳಲ್ಲಿ ಐದು ನಾಗರಹಾವುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತರಿಂದ ಹಾವಿನ ವಿಷ ಎನ್ನಲಾದ 20 ಎಂಎಲ್ ದ್ರವವೂ ಪತ್ತೆಯಾಗಿತ್ತು. ಬಂಧಿತ ಹಾವಾಡಿಗರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರು ಎಲ್ವಿಶ್ ಯಾದವ್ ಮತ್ತು ಇತರ ಆರೋಪಿಗಳನ್ನು ಬಂಧಿಸಿದ್ದರು.