ಧಾರ್ಮಿಕ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವುದರಲ್ಲಿ ಭಾರತವು ಬಾಂಗ್ಲಾದೇಶಕ್ಕಿಂತ ಹೇಗೆ ಭಿನ್ನವಾಗಿದೆ?: ಮೆಹಬೂಬ ಮುಫ್ತಿ ಪ್ರಶ್ನೆ
ಜಮ್ಮು: ಭಾರತವು ಬಾಂಗ್ಲಾದೇಶಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ಪ್ರಶ್ನಿಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು,ಎರಡೂ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಕಿರುಕುಳಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ತುಂಬ ಕೆಟ್ಟದಾಗಿದೆ ಮತ್ತು ನಮ್ಮ ಹಿಂದು ಸೋದರರು ಅಲ್ಲಿ ಕಿರುಕುಳಗಳನ್ನು ಎದುರಿಸುತ್ತಿದ್ದಾರೆ ಎಂದು ನಾವು ಕೇಳುತ್ತಿದ್ದೇವೆ. ನಾವು ಇಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿದ್ದೇವೆ. ಹೀಗಾಗಿ ವ್ಯತ್ಯಾಸವೇನಿದೆ?’ ಎಂದು ಪ್ರಶ್ನಿಸಿದರು.
‘ನಮ್ಮದು ದೊಡ್ಡ,ಜಾತ್ಯಾತೀತ ದೇಶವಾಗಿದ್ದು ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ಆದರೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಕಿರುಕುಳವನ್ನು ಎದುರಿಸುತ್ತಿದ್ದರೆ ಮತ್ತು ಶಿವಲಿಂಗವನ್ನು ಹುಡುಕಲು ಮಸೀದಿಗಳನ್ನು ಧ್ವಂಸಗೊಳಿಸುತ್ತಿದ್ದರೆ ನಮ್ಮ ಮತ್ತು ಬಾಂಗ್ಲಾದೇಶದ ನಡುವೆ ವ್ಯತ್ಯಾಸವೇನು?’ ಎಂದು ಹೇಳಿದ ಮುಫ್ತಿ,ಬಾಂಗ್ಲಾದೇಶದಲ್ಲಿ ಹಿಂದುಗಳಿಗೆ ಕಿರುಕುಳದ ಬಗ್ಗೆ ಚರ್ಚೆಯಾಗುತ್ತಿದೆ, ಅಲ್ಲಿ ಹಿಂದುಗಳನ್ನು ಜೈಲಿಗೆ ತಳ್ಳಲಾಗುತ್ತಿದೆ. ಉಮರ್ ಖಾಲಿದ್ ಜೈಲಿನಲ್ಲಿರುವ ಭಾರತದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ ಎಂದು ಬಾಂಗ್ಲಾದೇಶದಲ್ಲಿ ದೇಶದ್ರೋಹದ ಆರೋಪದಲ್ಲಿ ಮೂವರು ಹಿಂದೂ ನಾಯಕರ ಬಂಧನವನ್ನು ಉಲ್ಲೇಖಿಸಿ ಹೇಳಿದರು.
ಭಾರತದಲ್ಲಿ ಬಹುಸಂಖ್ಯಾತ ಹಿಂದುಗಳು ಜಾತ್ಯಾತೀತರಾಗಿದ್ದಾರೆ ಎನ್ನುವುದರಲ್ಲಿ ತನಗೆ ಯಾವುದೇ ಶಂಕೆಯಿಲ್ಲ ಎಂದ ಮುಫ್ತಿ ಎಚ್ಚೆತ್ತುಕೊಳ್ಳುವಂತೆ ಅವರನ್ನು ಕೇಳಿಕೊಂಡರು. ದೇಶವು ಎಲ್ಲ ಧಾರ್ಮಿಕ ಸಮುದಾಯಗಳಿಗೆ ಸೇರಿದೆ ಎಂದು ಅವರು ಪ್ರತಿಪಾದಿಸಿದರು.
ಯುವಜನರಿಗೆ ಉತ್ತಮ ಶಿಕ್ಷಣ,ಉದ್ಯೋಗ ಮತ್ತು ಉತ್ತಮ ಆರೋಗ್ಯ ಸೇವೆ ದೊರೆಯುತ್ತಿಲ್ಲ. ನಿಮಗೆ ನಮ್ಮ ರಸ್ತೆಗಳು,ಬೀದಿಗಳನ್ನು ದುರಸ್ತಿ ಮಾಡಲಾಗುತ್ತಿಲ್ಲ. ಹಾಗಾದರೆ ನೀವೇನು ಮಾಡುತಿದ್ದೀರಿ? ನೀವು ಮಸೀದಿಗಳನ್ನು ಧ್ವಂಸಗೊಳಿಸುತ್ತಿದ್ದೀರಿ ಮತ್ತು ಅವುಗಳ ಕೆಳಗೆ ದೇವಸ್ಥಾನಗಳನ್ನು ಹುಡುಕುತ್ತಿದ್ದೀರಿ ಎಂದು ಅವರು ಹೇಳಿದರು.