ಕೇಂದ್ರ ಕಲ್ಲಿದ್ದಲು ಸಚಿವಾಲಯವು ಅದಾನಿಗೆ ಲಾಭವಾಗುವಂತೆ ದಟ್ಟ ಅರಣ್ಯಗಳನ್ನು ಗಣಿಗಾರಿಕೆಗೆ ಲಭ್ಯವಾಗಿಸಿದ್ದು ಹೇಗೆ?
ಹೊಸದಿಲ್ಲಿ: ಕೇಂದ್ರ ಕಲ್ಲಿದ್ದಲು ಸಚಿವಾಲಯವು ಪ್ರಮುಖ ಖಾಸಗಿ ವಿದ್ಯುತ್ ಕಂಪನಿಗಳನ್ನು ಒಳಗೊಂಡಿದ್ದ ಉದ್ಯಮ ಗುಂಪೊಂದರಿಂದ ವಶೀಲಿಬಾಜಿಯ ಬಳಿಕ ದೇಶದಲ್ಲಿಯ ದಟ್ಟ ಅರಣ್ಯಗಳನ್ನು ಗಣಿಗಾರಿಕೆಗೆ ಮುಕ್ತಗೊಳಿಸಲು ಪರಿಸರ ಸಚಿವಾಲಯವನ್ನು ಉಲ್ಲಂಘಿಸಿತ್ತು ಎನ್ನುವುದನ್ನು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ಗೆ ಲಭ್ಯವಾಗಿರುವ ದಾಖಲೆಗಳು ಬಹಿರಂಗಗೊಳಿಸಿವೆ.
2021ರಲ್ಲಿ ದೇಶದಲ್ಲಿ ಕಲ್ಲಿದ್ದಲು ಕೊರತೆಯಿದೆ ಎಂಬ ವದಂತಿಗಳು ಸೃಷ್ಟಿಯಾಗಿದ್ದವು ಮತ್ತು ಈ ಕೊರತೆಯನ್ನು ನೀಗಿಸಲು ಭಾರತದ ದಟ್ಟ ಅರಣ್ಯಗಳಲ್ಲೊಂದರಲ್ಲಿನ ಎರಡು ಕಲ್ಲಿದ್ದಲು ಬ್ಲಾಕ್‌ಗಳನ್ನು ಹರಾಜಿಗೆ ಮುಕ್ತಗೊಳಿಸುವಂತೆ ವಿದ್ಯುತ್ ಉತ್ಪಾದಕರ ಸಂಘ (ಎಪಿಪಿ)ವು ಆ ವರ್ಷದ ನವಂಬರ್‌ನಲಿ ಕಲ್ಲಿದ್ದಲು ಸಚಿವಾಲಯಕ್ಕೆ ಪತ್ರ ಬರೆದಿತ್ತು,ಆದರೆ ಇದರ ಹಿಂದೆ ತನ್ನ ಸದಸ್ಯ ಅದಾನಿ ಗ್ರೂಪ್‌ಗೆ ಲಾಭವನ್ನುಂಟು ಮಾಡುವ ಹುನ್ನಾರವಿತ್ತು.
ಎಪಿಪಿ ಲಾಬಿ ನಡೆಸಿದ್ದ ಎರಡು ಬ್ಲಾಕ್‌ಗಳ ಪೈಕಿ ಒಂದು ಮಧ್ಯಪ್ರದೇಶದ ಸಿಂಗ್ರೌಲಿ ಕಲ್ಲಿದ್ದಲು ಕ್ಷೇತ್ರದಲ್ಲಿ ಮತ್ತು ಅದಾನಿ ಗ್ರೂಪ್‌ನ ಉಷ್ಣ ವಿದ್ಯುತ್ ಸ್ಥಾವರದ ಸಮೀಪವಿತ್ತು. ಅದಾನಿ ಗ್ರೂಪ್ 2022,ಮಾರ್ಚ್‌ನಲ್ಲಿ ಈ ಸ್ಥಾವರವನ್ನು ಸ್ವಾಧೀನ ಪಡಿಸಿಕೊಂಡಿತ್ತು. ಇನ್ನೊಂದು ಬ್ಲಾಕ್ ಛತ್ತೀಸ್‌ಗಡದ ಹಸ್ದೇವ್ ಅರಂಡ್ ಅರಣ್ಯದಲ್ಲಿ,ಅದಾನಿ ಗ್ರೂಪ್ ಗಣಿಗಾರಿಕೆ ನಡೆಸುತ್ತಿದ್ದ ಬ್ಲಾಕ್‌ಗಳಿಗೆ ಹೊಂದಿಕೊಂಡೇ ಇತ್ತು.
ಈ ಎರಡು ಬ್ಲಾಕ್‌ಗಳನ್ನು ಮುಕ್ತಗೊಳಿಸಲು ಕಲ್ಲಿದ್ದಲು ಸಚಿವಾಲಯ ಎಪಿಪಿಯ ಬೇಡಿಕೆಗೆ ಮಣಿದಿದ್ದಷ್ಟೇ ಅಲ್ಲ,ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೆಚ್ಚಿನ ಜೀವವೈವಿಧ್ಯ ಮೌಲ್ಯವನ್ನು ಹೊಂದಿರುವ ಮತ್ತು ಸಂರಕ್ಷಣೆ ಅಗತ್ಯವಿರುವ ಪ್ರದೇಶಗಳಲ್ಲಿಯ 15 ಕಲ್ಲಿದ್ದಲು ಬ್ಲಾಕ್‌ಗಳನ್ನು ಹರಾಜು ಹಾಕದಂತೆ 2018ರಲ್ಲಿ ಪರಿಸರ ಸಚಿವಾಲಯವು ನೀಡಿದ್ದ ಸಲಹೆಗಳ ಪುನರ್‌ಪರಿಶೀಲನೆಗೂ ಒತ್ತಡ ಹೇರಿತ್ತು. ಈ ಕಲ್ಲಿದ್ದಲು ಬ್ಲಾಕ್‌ಗಳ ಪೈಕಿ ಅದಾನಿ ಪಾಲಾಗಲಿದ್ದ ಒಂದು ಬ್ಲಾಕ್ ಕೂಡ ಸೇರಿತ್ತು.
ಪುನರ್‌ಪರಿಶೀಲನೆಗೆ ಮಾರ್ಗವನ್ನು ಸುಗಮಗೊಳಿಸಲು ಕಲ್ಲಿದ್ದಲು ಸಚಿವಾಲಯವು ಈ 15 ಬ್ಲಾಕ್‌ಗಳ ಭಾಗಗಳನ್ನು ಅರಣ್ಯಗಳಿಗೆ ಯಾವುದೇ ಹಾನಿಯಾಗದಂತೆ ಗಣಿಗಾರಿಕೆಗಾಗಿ ಪ್ರತ್ಯೇಕಿಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸುವ ಕಾರ್ಯವನ್ನು ಸೆಂಟ್ರಲ್ ಮೈನ್ ಪ್ಲಾನಿಂಗ್ ಆ್ಯಂಡ್ ಡಿಸೈನ್ ಇನ್‌ಸ್ಟಿಟ್ಯೂಟ್ (ಸಿಎಂಪಿಡಿಐ)ಗೆ ವಹಿಸಿತ್ತು. ಕಲ್ಲಿದ್ದಲು ಸಚಿವಾಲಯದೊಂದಿಗೆ ಸಂಯೋಜನೆ ಹೊಂದಿರುವ ಈ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿರುವಂತೆ ‘ಖನಿಜ ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿರುವ ಎಲ್ಲರಿಗೂ ತಜ್ಞ ಸಲಹೆಗಾರ ’ಆಗಿದೆ.
15 ಬ್ಲಾಕ್‌ಗಳು ಅತ್ಯಂತ ದಟ್ಟಾರಣ್ಯಗಳಿಂದ ಆವೃತ ಪ್ರದೇಶಗಳಲ್ಲಿ ಇರುವುದರಿಂದ ಈ ಪೈಕಿ ಯಾವುದನ್ನೂ ಗಣಿಗಾರಿಕೆಗೆ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಸಿಎಂಪಿಡಿಐ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು. ಆದಾಗ್ಯೂ ಕಲ್ಲಿದ್ದಲು ಸಚಿವಾಲಯವು ತನ್ನದೇ ಆದ ತಜ್ಞ ವೈಜ್ಞಾನಿಕ ಸಂಸ್ಥೆಯ ವರದಿಯನ್ನು ಕಡೆಗಣಿಸಿತ್ತು ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.