ಶಿಮ್ಲಾ, ಮನಾಲಿಯಲ್ಲಿ ಹಿಮಪಾತ: 4 ಮಂದಿ ಮೃತ್ಯು; ಪ್ರವಾಸಿಗಳಿಗೆ ಸಂಕಷ್ಟ
ಶಿಮ್ಲಾ: ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಹಿಮಾಚಲ ಪ್ರದೇಶಕ್ಕೆ ತೆರಳುವ ಪ್ರವಾಸಿಗರಿಗೆ ನಿರಾಸೆ ಕಾದಿದ್ದು, ಶಿಮ್ಲಾ ಮತ್ತು ಮನಾಲಿ ಸೇರಿದಂತೆ ಆಕರ್ಷಕ ಪ್ರವಾಸಿ ತಾಣಗಳು ಸಂಪೂರ್ಣ ಹಿಮದಿಂದಾವೃತಗೊಂಡಿವೆ. ಇಡೀ ರಾಜ್ಯ ವೈಟ್ ವಂಡರ್ ಲ್ಯಾಂಡ್ ಆಗಿ ಪರಿಣಮಿಸಿದ್ದು, ಪಕ್ಕದ ಜಮ್ಮು & ಕಾಶ್ಮೀರದಲ್ಲಿ ಕೂಡಾ ಭಾರಿ ಹಿಮಪಾತವಾಗುತ್ತಿದೆ. ತಾಪಮಾನ ಕುಸಿದಿದ್ದು, ಕ್ರಿಸ್ಮಸ್ ರಜಾ ಕಾಲದಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿ ಪರಿಣಮಿಸಿದೆ.
ಶಿಮ್ಲಾ, ಮನಾಲಿ ಸೇರಿದಂತೆ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಶ್ವೇತ ಕ್ರಿಸ್ಮಸ್ ಅನುಭವವನ್ನು ಪಡೆಯುತ್ತಿದ್ದು, ಮಂಜು ಮುಸುಕಿದ ಕಾರಣದಿಂದ 200ಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ. ಹೋಟೆಲ್ ಬುಕ್ಕಿಂಗ್ ಗಳಲ್ಲಿ ಭಾರೀ ಏರಿಕೆಯಾಗಿದ್ದು, ವಾಹನಗಳು ಜಾರಿ ಸಂಭವಿಸಿದ ದುರಂತಗಳಲ್ಲಿ ಇದುವರೆಗೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶಿಮ್ಲಾ ಮತ್ತು ಮನಾಲಿನ ಪ್ರಕೃತಿ ಸೌಂದರ್ಯ ಹಿಮದ ಹೊದಿಕೆಯಿಂದ ಮುಚ್ಚಿರುವ ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿವೆ. ರಾಜ್ಯದ ವಿವಿಧೆಡೆಗಳಲ್ಲಿ ಲಘು ಮಳೆ ಮತ್ತು ಹಿಮಪಾತವನ್ನು ಹವಾಮಾನ ಇಲಾಖೆ ಅಂದಾಜಿಸಿದ್ದು, ಶುಕ್ರವಾರದಿಂದ ಭಾನುವಾರ ಸಂಜೆವರೆಗೂ ಈ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಶನಿವಾರ ಭಾರಿ ಹಿಮಪಾತದ ಸಾಧ್ಯತೆಯನ್ನು ಅಂದಾಜಿಸಿದೆ.
ರಾಜ್ಯದಲ್ಲಿ ಸರಾಸರಿ ಹೋಟೆಲ್ ಬುಕ್ಕಿಂಗ್ ಶೇಕಡ 70ರಷ್ಟಿದ್ದು, ಹಿಮಪಾತದಿಂದಾಗಿ ಬುಕ್ಕಿಂಗ್ ಶೇಕಡ 30ರಷ್ಟು ಹೆಚ್ಚಳವಾಗಿದೆ ಎಂದು ಶಿಮ್ಲಾ ಹೋಟೆಲ್ ಮತ್ತು ಪ್ರವಾಸೋದ್ಯಮ ವಿಭಾಗದ ಅಧ್ಯಕ್ಷ ಎಂ.ಕೆ.ಸೇಟ್ ಹೇಳಿದ್ದಾರೆ.
ಸುಮಾರು 223 ರಸ್ತೆಗಳನ್ನು ಮಂಗಳವಾರ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅತ್ತಾರಿ ಮತ್ತು ಲೆಹ್, ಸಂಜ್ ನಿಂದ ಆಟ್, ಖಾಬ್ ಸಂಗಮ್, ಗ್ರಾಂಫೂ ಹೆದ್ದಾರಿಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಟಲ್ ಸುರಂಗದ ಬಳಿ ನೂರಾರು ವಾಹನಗಳು ಅತಂತ್ರವಾಗಿ ಸಿಕ್ಕಿಹಾಕಿಕೊಂಡಿವೆ. ಸೋಮವಾರ ಬಹುತೇಕ ವಾಹನಗಳನ್ನು ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಓಂಕಾರ್ ಶರ್ಮಾ ಹೇಳಿದ್ದಾರೆ.