ಮಹಾರಾಷ್ಟ್ರ: ಧಾರ್ಮಿಕ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ ಅಸ್ವಸ್ಥರಾದ ಭಕ್ತರು; ನೂರಾರು ರೋಗಿಗಳಿಗೆ ರಸ್ತೆಯಲ್ಲೇ ಚಿಕಿತ್ಸೆ

Update: 2024-02-21 08:59 GMT

Photo: NDTV

ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಹಾರ ಸೇವಿಸಿದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಮೂನ್ನೂರಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ನಿನ್ನೆ (ಮಂಗಳವಾರ) ಅಸ್ವಸ್ಥಗೊಂಡಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಬುಲ್ಧಾನಾದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರಪೂರ್ತಿ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನದಂದು ಜನರು ವಿಷಪೂರಿತ ಆಹಾರ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.

ಅವರನ್ನೆಲ್ಲ ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ, ಹಾಸಿಗೆಯ ಕೊರತೆಯಿಂದ ಅವರಿಗೆಲ್ಲ ಆಸ್ಪತ್ರೆಯ ಹೊರಗೇ ಚಿಕಿತ್ಸೆ ನೀಡಲಾಗಿದೆ.

ನೆಲದ ಮೇಲೆ ಮಲಗಿರುವ ರೋಗಿಗಳಿಗೆ ಮರಕ್ಕೆ ಹಗ್ಗವನ್ನು ಕಟ್ಟಿ ಗ್ಲೂಕೋಸ್ ಬಾಟಲಿಗಳನ್ನು ತೂಗು ಹಾಕುವ ಮೂಲಕ ಗ್ಲೂಕೋಸ್‌ ಪೂರೈಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ಕುರಿತು NDTV ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಗ್ರಾಮಸ್ಥರು, "ನಾವು ಆಸ್ಪತ್ರೆಗೆ ಧಾವಿಸಿದಾಗ, ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಇರಲಿಲ್ಗ. ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸ್ಥಳಕ್ಕೆ ಕೆಲವು ಖಾಸಗಿ ವೈದ್ಯರನ್ನು ಕರೆಸಬೇಕಾಯಿತು" ಎಂದು ಆರೋಪಿಸಿದ್ದಾರೆ.

ಅಸ್ವಸ್ಥಗೊಂಡಿರುವ ರೋಗಿಗಳ ಪೈಕಿ 30 ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News